ಕಾಸರಗೋಡು: ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಬೃಹತ್ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪಿಲಿಕುಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕಚೇರಿ ಸಂಕೀರ್ಣ ಪೂರ್ಣಗೊಂಡ ತಕ್ಷಣ 18 ಸರಕಾರಿ ಕಚೇರಿಗಳು ಸ್ಥಳಾಂತರಗೊಳ್ಳಲಿವೆ. ಈಗ ಒಂದೇ ಒಂದು ಮ್ಯೂಸಿಯಂ ಇಲ್ಲದೇ ಇರುವ ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ತಾಲೂಕು ಕಚೇರಿಯನ್ನು ಪರಂಪರೆ ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 12 ಕೋಟಿ ರೂ. ವೆಚ್ಚದಲ್ಲಿ ಕೋಳಿಯಡ್ಕದಲ್ಲಿ ದೊಡ್ಡ ಮೈದಾನ ನಿರ್ಮಿಸಿ, ಜಿಲ್ಲಾ ಸ್ಟೇಡಿಯಂ ನಿರ್ಮಿಸಲಾಗುವುದು. ನಾಯನ್ಮಾರುಮೂಲೆಯಲ್ಲಿ ಜಿಲ್ಲೆಯ ಮೊತ್ತಮೊದಲ ಟೆನ್ನಿಸ್ ಕೋರ್ಟ್ ನಿರ್ಮಾಣಮಾಡಲಾಗುವುದು. 200 ಪರಿಶಿಷ್ಟ ಜಾತಿ-ಪಂಗಡದ ಮಕ್ಕಳಿಗೆ ವಸತಿ ಸೌಲಭ್ಯಗಳಸಹಿತ ಲೋಕಸೇವಾ ಆಯೋಗದ ತರಬೇತಿ ನೀಡಲಾಗುವುದು. 25 ವರ್ಷಕ್ಕಿಂತ ಕೆಲಗಿನ ವಯೋಮಾನದ ಮೊಬೈಲ್ ಫೆÇೀನ್, ಮಾದಕದ್ರವ್ಯಕ್ಕೆ ದಾಸರಾಗಿರುವ ಮಕ್ಕಳನ್ನು ಸರಿಯಾದ ದಿಶೆಗೆ ಕರೆತರುವ ನಿಟ್ಟಿನಲ್ಲಿ ಯೋಜನೆ ಸಹಿತ ಬೃಹತ್ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರದ ರೈಲು ನಿಲ್ದಾಣದ ಸ್ವರೂಪ ಪೂರ್ಣ ರೂಪದಲ್ಲಿ ಬದಲಾಗುವಂಥಾ ಅಭಿವೃದ್ಧಿ ಕ್ರಮಗಳನ್ನು ನಡೆಸಲಾಗುವುದು. ನಿಲ್ದಾಣ ಆವರಣದಲ್ಲಿ ಹೂದೋಟ ನಿರ್ಮಿಸಲಾಗುವುದು. ಹೆಚ್ಚುವರಿ ವಾಹನನಿಲುಗಡೆ ಸೌಲಭ್ಯ ಏರ್ಪಡಿಸಲಾಗುವುದು. ತಳಂಗರೆ ಮಸೀದಿಯಿಂದ ಕರಂದೆಕ್ಕಾಡ್ ವರೆಗೆ ರಸ್ತೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು. ಸಂಚಾರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಟಿ ರಸ್ತೆ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆ ಪ್ರಕಾರ ಹಳೆ ಬಸ್ ನಿಲ್ದಾಣ ಬಳಿಯಿಂದ ರೈಲು ನಿಲ್ದಾಣ ವರೆಗೆ ಮತ್ತು ಕರಂದೆಕ್ಕಾಡ್ ಪ್ರದೇಶಗಳಲ್ಲಿ ರಸ್ತೆಯ ನವೀಕರಣ ನಡೆಸಲಾಗುವುದು. ಇದರೊಂದಿಗೆ ಇಂಟರ್ ಲಾಕ್ ನಡೆಸಿದ ರಸ್ತೆಗಳು, ಟೈಲ್ಸ್ ನಡೆಸಿದ ಕಾಲ್ನಡಿಗೆ ಹಾದಿಗಳು ನಗರದ ಸ್ವರೂಪ ಬದಲಿಸಲಿವೆ. ವಿವಿಧ ಬಸ್ ನಿಲುಗಡೆಗಳಲ್ಲಿ ವೈಫೈ ಸೌಲಭ್ಯ ಅಳವಡಿಸಲಾಗುವುದು.
ವಿವಿಧ ಹೋಟೆಲ್ ಗಳಲ್ಲಿ ಆಹಾರದ ಬೆಲೆ ವಿಭಿನ್ನವಾಗಿರುವ ಬಗ್ಗೆ ಲಭಿಸಿರುವ ದೂರುಗಳ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಗಳಿಗೆ ಜಂಟಿ ದಾಳಿ ನಡೆಸಿ ತಪಾಸಣೆ ಜರುಗಲಿಸಲು ತಾಲೂಕು ಸಮಿತಿ ಸಭೆ ತೀರ್ಮಾನಿಸಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಕಮಾನಕ್ಕೆ ಹೊಳಪು ನೀಡುವ ಕ್ರಮಕೈಗೊಳ್ಳಲಾಗುವುದು ಎಂದುಜನರಲ್ ಆಸ್ಪತ್ರೆಯ ವರಿಷ್ಠಾಧಿಕಾರಿ ತಿಳಿಸಿದರು. ಕಾಸರಗೋಡು ನೂತನ ಬಸ್ ನಿಲ್ದಾಣ, ಹಲೆಯ ಬಸ್ ನಿಲ್ದಾಣ ಪ್ರದೇಶಗಳಲ್ಲಿ ಹೈಪ್ರೆಷರ್ ಕುಡಿಯುವ ನೀರಿನ ಸರಬರಾಜು ಸುಗಮಗೊಳಿಸಲಾಗುವುದು ಎಂದು ಜಲಪ್ರಾಧಿಕಾರಿದ ಅಧಿಕಾರಿಗಳು ತಿಳಿಸಿದರು. ತಾಲೂಕು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜವಾಬ್ದಾರಿ ಹೊಂದಿರುವ ಎಲ್ಲ ಹಿರಿಯ ಸಿಬ್ಬಂದಿ ಭಾಗವಹಿಸಬೇಕು ಎಂದು ಸಭೆ ಆಗ್ರಹಿಸಿದೆ.
ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ (ಭೂ ದಾಖಲೆ) ಎನ್.ಎಸ್.ಅನಿತಾ, ತಹಸೀಲ್ದಾರ್ ಎ.ವಿ.ರಾಜನ್, ಸಹಾಯಕ ಜಿಲ್ಲಾಧಿಕಾರಿ (ಲ್ಯಾಂಡ್ ಕಂದಾಯ), ಅಹಮ್ಮದ್ಕಬೀರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.





