ಕಾಸರಗೋಡು: ಜಿಲ್ಲೆಯಲ್ಲಿ ವಿಧವೆಯರ ಕಲ್ಯಾಣ ಮತ್ತು ಸಂರಕ್ಷಣೆ ಗಾಗಿ ಜಿಲ್ಲಾಡಳಿತೆ ವ್ಯಾಪ್ತಿಯಲ್ಲಿ "ಕೂಟ್(ಜತೆಗಾರರು)" ಎಂಬ ಹೆಸರಲ್ಲಿ ವಿಶೇಷ ಯೋಜನೆ ಜಾರಿಗೊಳಿಸಲಾಗುವುದು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಪತಿ ನಿಧನರಾದ ಮಹಿಳೆಯರ ಜತೆಯಲ್ಲೇ ಪತಿ ತೊರೆದು ಹೋದವರ, ಪತಿ ನಾಪತ್ತೆಯಾಗಿರುವವರ, ವಿಚ್ಛೇದಿತ ಮಹಿಳೆಯರಿಗೂ ಈ ಯೋಜನೆಯ ಸೌಲಭ್ಯಗಳು ಲಭಿಸಲಿವೆ. ಈ ಯೋಜನೆಯ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್ ಗಲಲ್ಲಿ, ನಗರಸಭೆಗಳಲ್ಲಿ, ವಾರ್ಡ್ ಮಟ್ಟದ ಸಮೀಕ್ಷೆ ನಡೆಸುವ ಉದ್ದೇಶದಿಂದ ಫೈ ನೆಕ್ಟ್ಸ್ ಇನ್ನವೇಷನ್ ಎಂಬ ಸ್ಟಾರ್ಟ್ ಅಪ್ ಮಿಷನ್ ನ ಸಹಾಯದೊಂದಿಗೆ ವಿಶೇಷ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗುವುದು. ಸಮೀಕ್ಷೆ ಪೂರ್ಣಗೊಂಡ ನಂತರ ಲಭ್ಯವಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಅರ್ಹ ಮಹಿಳೆಯರನ್ನು ಗುರುತಿಸಿ ಕೇಂದ್ರ-ರಾಜ್ಯ ಸರಕಾರಗಳ ಯೋಜನೆಗಳ ವ್ಯಾಪ್ತಿಯಲ್ಲಿ ಲಭಿಸುವ ಆರ್ಥಿಕ ಸಹಾಯ, ಇನ್ನಿತರ ಸೌಲಭ್ಯ ಒದಗಿಸುವ ಯತ್ನದ ಕ್ರಮ ನಡೆಸಲಾಗುವುದು. ಜಾರಿಯಲ್ಲಿರುವ ಸರಕಾರಿ ಯೋಜನೆಗಳಲ್ಲದೆ ವಿಧವೆಯರ ಸಂರಕ್ಷಣೆ ಸಮಿತಿಯ ಯೋಜನೆಗಳೊಂದಿಗೂ ಸಹಕರಿಸಲಾಗುವುದು. ಜೊತೆಗೆ ಸ್ವಯಂಸೇವಾ ಸಂಘಟನೆಗಳ, ಎನ್.ಜಿ.ಒ.ಗಳ ಸಹಕರವನ್ನೂ ಕೋರಲಾಗುವುದು. ಜಾರಿಯಲ್ಲಿರುವ ವಿವಿಧ ಸರಕಾರಿ ಯೋಜನೆಗಳ ವ್ಯಾತಿಯಲ್ಲಿ ನೌಕರಿ, ನೈಪುಣ್ಯ ತರಬೇತಿ ನೀಡಿ ವಿಧವೆಯರನ್ನು ಸ್ವ ಉದ್ಯೋಗ ಆರಂಭಿಸಲು ಸಬಲೀಕರಿಸಲಾಗುವುದು. ಕೇಂದ್ರ ಸರಕಾರದ ಯೋಜೆಗಳ ಬಗ್ಗೆ ವಿಧವೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ಪುನರ್ ವಿವಾಹ ಬಗ್ಗೆ ಆಸಕ್ತರಾದವರಿಗೆ ಬೇಕಾದ ಸಹಾಯಗಳನ್ನೂ ಒದಗಿಸಲಾಗುವುದು.




