HEALTH TIPS

ಮಕರ ಸಂಕ್ರಾಂತಿ: ಏನಿದರ ಮಹತ್ವ?

                       
      ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.
  ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
   ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
   ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.
   ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.
    ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. (ಶನಿಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿ ಭಯ) ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾರಣ ಅವರ ಪಾಪ ನಾಮ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.
      ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.
    ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.
      ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.
  ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಸುಗ್ಗಿಯೆಂದು ಕರೆದರೆ ತಮಿಳಿಗರಿಗೆ 'ಪೆÇಂಗಲ್' ಸಂಭ್ರಮದ ಹಬ್ಬ, ಕೇರಳಿಗರು 'ಮಕರವಿಳಕ್ಕು'ವಿನ ಬೆಳಕಿಗೆ ಕಾತುರರಾಗಿರುತ್ತಾರೆ. ಆಂಧ್ರಪ್ರದೇಶದಲ್ಲಿ 'ಭೋಗಿ'ಯ ಬೆಂಕಿ ಹಬ್ಬದ ಸಂಭ್ರಮವನ್ನು ಸಾರಿ ಹೇಳುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯನ್ನು ಈ ಎಲ್ಲಾ ಹೆಸರಿನಿಂದ ಕರೆದರೆ ಉತ್ತರ ಭಾರತದ ಗುಜರಾತ್ ನಲ್ಲಿ ಉತ್ತರಾಯಣವೆಂದೂ, ಪಂಜಾಬಿನಲ್ಲಿ ಲೊಹ್ರಿ, ಅಸ್ಸಾಂನಲ್ಲಿ ಮಾಘ ಬಿಹು, ಪಂಜಾಬ್‍ನಲ್ಲಿ ಸಿಖ್ ಸಮುದಾಯವು ವೈಸಾಖಿ ಎಂದು ಆಚರಿಸುತ್ತಾರೆ.
      ಮಕರ ಸಂಕ್ರಾಂತಿ ಪುಣ್ಯ ಕಾಲ: ಜನವರಿ 15, 2020 ಸಮಯ ಬೆಳಗ್ಗೆ 6:46 ರಿಂದ ಸಂಜೆ 6:12
      ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ: ಜನವರಿ 15, 2020 ಸಮಯ ಬೆಳಗ್ಗೆ 6:46 ರಿಂದ ಬೆಳಗ್ಗೆ 8:40
      ಮಹಾ ಸಂಕ್ರಾಂತಿ ಕಾಲ: ಜನವರಿ 15, 2020, ಮುಂಜಾನೆ 2:22
        ಪ್ರತಿವರ್ಷ ಮಕರ ಸಂಕ್ರಾಂತಿಯನ್ನು ಜನವರಿ14ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಜನವರಿ14 ಹಾಗೂ 15 ರ ಮಧ್ಯ ಕಾಲ ಅಂದರೆ ಮುಂಜಾನೆ 1. 45ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಉತ್ತರಾಯಣವನ್ನು ನಡೆಸಿದರೆ, ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ತಿರುಗುತ್ತದೆ.
   ಹೆಚ್ಚಾಗಿ ಹಿಂದೂ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲ ಕಳೆದು ವಸಂತ ಕಾಲದ ಆಗಮನವಾಗುತ್ತದೆ, ಇದರಿಂದಾಗಿ ದಿನಗಳು ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ.
      ಸಂಕ್ರಾಂತಿಯ ಮಹತ್ವ
ಮಕರವೆಂದರೆ ಹತ್ತನೇ ರಾಶೀ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವನ್ನು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ವರ. ಇವನು ಸೂರ್ಯಪುತ್ರ. ಈ ದಿನದಂದು ಸೂರ್ಯನು ತನ್ನ ಮಗನ ಆಡಳಿತಕ್ಕೊಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗುತ್ತದೆ.
   ಒಂದು ರೀತಿಯಲ್ಲಿ ಸ್ವತಃ ತಂದೆ ಮಗನಾದ ಸೂರ್ಯ ಶನೀಶ್ವರರು ಇಬ್ಬರೂ ವಿರುದ್ಧವಾದವರು. ಆದರೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದರಿಂದಾಗಿ ಈ ಸಂದರ್ಭವು ಮನುಷ್ಯರಿಗೆ ದ್ವೇಷ ಹಾಗೂ ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.
    ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನವನ್ನು ಬಿಟ್ಟು ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶವನ್ನು ಈ ಸಂಕ್ರಾಂತಿಯು ಹೊತ್ತು ತರುತ್ತದೆ. ಹಾಗಾಗಿ ಸೂರ್ಯನ ಶಕ್ತಿ ಹಾಗೂ ಹೃದಯವೈಶಾಲ್ಯತೆಯನ್ನು ಸ್ಮರಿಸಿ, ಅನಗತ್ಯ ವಾದ ವಿವಾದಗಳನ್ನು ಬದಿಗಿಟ್ಟು ಅರ್ಥಪೂರ್ಣ ಸಂಬಂಧಗಳನ್ನು ಸ್ಥಾಪಿಸಿ ಹಾಗೂ ಸಂತೋಷದ ಕ್ಷಣಗಳನ್ನು ಈ ಸಂಕ್ರಾಂತಿಯಂದು ಆಚರಿಸೋಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries