ಮಂಜೇಶ್ವರ: ಸರಳ ರಚನೆಯ ಧ್ಯಾನಸ್ಥ ಸ್ಥಿತಿಯಲ್ಲಿರುವ ಕವಿತೆಗಳ ಸಾಲು ಆದ್ರ್ರವಾಗಿ ನಮ್ಮನ್ನು ತಟ್ಟುತ್ತದೆ. ಬದುಕಿನ ವಿಭಿನ್ನ ಭಾವನೆಗಳನ್ನು ತಿಳಿಸುವ ಕವಿತೆಗಳು ವರ್ತಮಾನದ ತಲ್ಲಣಗಳಿಗೆ ಕವಿಯಿತ್ರಿಯ ಸ್ಪಂಧನ, ಬದುಕಿನ ಕುರಿತಾದ ಭೂತ, ವರ್ತಮಾನ ಮತ್ತು ಭವಿಷ್ಯದ ಗಂಭೀರ ಜಿಜ್ಞಾಸೆಯ ಮರುಭೂಮಿಯ ಮಳೆಹನಿಗಳು ಕವನ ಸಂಕಲನ ಅಪೂರ್ವ ಸಂಕಲನ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ ಏತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಹೊಸಬೆಟ್ಟಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆವರಣದಲ್ಲಿ ಇತ್ತೀಚೆಗೆ ನಡೆದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಅವರ ಚೊಚ್ಚಲ ಕವನ ಸಂಕಲನ ಮರುಭೂಮಿಯ ಮಳೆ ಹನಿಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಅವರು ಮಾತನಾಡಿದರು.
ಹೆಣ್ಣಿನ ಅಂತರಂಗ, ಸಮಾಜ ವಿಮರ್ಶೆ, ದುಃಖ, ಸಡಗರ ಮೊದಲಾದ ಭಾವಗಳ ಕವಿತೆಗಳು ಕವಯಿತ್ರಿಯ ಜ್ಞಾನ ವಿಸ್ತಾರತೆಯ ಅರಿವನ್ನು ಪರಿಚಯಿಸುವುದರೊಂದಿಗೆ ಅಚ್ಚರಿಗೊಳಿಸುತ್ತದೆ. ಭಾವನೆಗಳಿಗೆ ಶಬ್ದರೂಪ ಕೊಡುವ ಅಪೂರ್ವ ಕಲೆಗಾರಿಕೆ ಕವಯಿತ್ರಿಗೆ ಸಿದ್ದಿಸಿದೆ ಎಂದು ತಿಳಿಸಿದರು. ದುಃಖ ಎನ್ನುವುದು ಎಲ್ಲಾ ಕವಿತೆಗಳ ಸ್ಥಾಯೀ ಭಾವವಾಗಿ ಎದ್ದುಕಾಣುತ್ತದೆ. ಆದ್ದರಿಂದ ಲಕ್ಷ್ಮೀ ಅವರ ಕಾವ್ಯ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಭರವಸೆ ಮೂಡಿಸಿ ಗಮನ ಸೆಳೆಯುತ್ತದೆ ಎಂದು ಅವರು ಈ ಸಂದರ್ಭ ಕೃತಿಯ ಪರಿಚಯ ನೀಡಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಕೃತಿ ಬಿಡುಗಡೆಗೊಳಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉದ್ಘಾಟಿಸಿದರು.
ಗೋವಿಂದ ಪೈ ಸ್ಮಾರಕ ಕಾಲೇಜಿನ ಸಹ ಪ್ರಾಂಶುಪಾಲೆ ಅಮಿತಾ ಎಸ್, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಸಲೀಂ, ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಎಂ.ಮೃದುಲಾ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ಶ್ರೀಕಾಂತ್ ನೆಟ್ಟಣಿಗೆ, ನಾಯ್ಕಾಪು ಶ್ರೀಶಾಸ್ತಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕಾಪು, ನಿವೃತ್ತ ಪ್ರಾಧ್ಯಾಪಕ ಪದ್ಮನಾಭ ಪೂಜಾರಿ, ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಉಪಸ್ಥಿತರಿದ್ದು ಶುಭಹಾರೈಸಿದರು. ಮಹೇಶ್ ರಾಜ್ ಉಪಸ್ಥಿತರಿದ್ದರು. ಕೃತಿಕರ್ತೆ ಲಕ್ಷ್ಮೀ ಕೆ. ಉಪಸ್ಥಿತರಿದ್ದು ಸಾಹಿತ್ಯ ಆಸಕ್ತಿ, ಬರವಣಿಗೆಯ ಬಗ್ಗೆ ತಿಳಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಗಣ್ಯರು ಅವರನ್ನು ಅಭಿನಂದಿಸಿ ಗೌರವಿಸಿ ಹಾರೈಸಿದರು. ಮಂಜೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಶಂಕರ ಪಿ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಧರ್ಮತ್ತಡ್ಕ ಶಾಲಾ ಶಿಕ್ಷಕ ಪ್ರಶಾಂತ್ ಹೊಳ್ಳ ಎನ್. ವಂದಿಸಿದರು.





