HEALTH TIPS

ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ-ವಿಚಾರಗೋಷ್ಠಿ


          ಬದಿಯಡ್ಕ: ಆಪತ್ತು ಎದುರಾದಾಗ ಮಾತ್ರ ಸಂಘಟಿತರಾಗುವ ಮನೋಭಾವ ಇರಬಾರದು. ಸದಾ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವುದೇ ಮುಂದಿನ ಜನಾಂಗಕ್ಕೆ ನಾವು ನೀಡುವ ಉಡುಗೊರೆಯಾಗಿದೆ. ಯುವಜನತೆಯು ವಿದ್ಯಾಭ್ಯಾಸ ಹಾಗೂ ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲೂ ಪುರೋಗತಿಯನ್ನು ಕಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು ಅಭಿಪ್ರಾಯಪಟ್ಟರು.
        ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಸಮಿತಿಯು ಭಾನುವಾರ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಸಭಾಂಗಣದಲ್ಲಿ ಹಮ್ಮಿಕೊಂಡ ವಿಚಾರಗೋಷ್ಠಿ ಮತ್ತು ವಾರ್ಷಿಕ ಮಹಾಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
        ಸಂಘಟನೆಯ ಮೂಲಕ ಮಧೂರು ಕ್ಷೇತ್ರದಲ್ಲಿ ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ಲಭಿಸಿದೆ ಎನ್ನುವುದು ಸಂತಸದ ವಿಚಾರವಾಗಿದೆ. ಇಡೀ ದೇಶಕ್ಕೆ ಅನನ್ಯ ಕೊಡುಗೆಯನ್ನು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಯೋಗ್ಯತೆಗೆ ಸಲ್ಲಬೇಕಾದ ಗೌರವ ಇತರ ಸಮಾಜದವರಿಂದ ಲಭಿಸುತ್ತಿಲ್ಲವೆನ್ನುವುದು ಖೇದಕರ. ಮೊಗೇರ ಸಮಾಜದ ಬಗ್ಗೆ ಕಾಳಜಿಯನ್ನಿಟ್ಟು ಅವರು ಕೈಗೊಂಡ ಕಾರ್ಯಗಳನ್ನು ಸದುಪಯೋಗಿಸಿಕೊಂಡು ಸಮಾಜವು ಪುರೋಗತಿಯತ್ತ ಸಾಗಬೇಕಾಗಿದೆ ಎಂದರು.
          ಮುಖ್ಯ ಅತಿಥಿಗಳಾಗಿ ಕುಂಬಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಪುಂಡರೀಕಾಕ್ಷ ಮಾತನಾಡಿ ಸಮುದಾಯಕ್ಕೆ ಲಭಿಸುವ ಅನುಕೂಲತೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೊಗೇರ ಸಮಾಜದ ಅಭ್ಯುದಯಕ್ಕೆ ನಾವು ಪಣತೊಡಬೇಕು. ಭೂಮಿಪುತ್ರರಾದ ಮೊಗೇರರು ಆರ್ಥಿಕವಾಗಿಯೂ ಸದೃಢರಾಗಿ ಸಮಾಜದಲ್ಲಿ ಶೋಷಣೆಗೆ ಒಳಗಾಗದೆ ತಲೆಯೆತ್ತಿ ನಿಲ್ಲಬೇಕು ಎಂದು ತಿಳಿಸಿದ ಅವರು ಮೊಗೇರ ಸಮಾಜವು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ನಾವು ಸಬಲರಾಗಬೇಕು ಎಂದರು.
     ಯುವ ವಿಜ್ಞಾನಿ ಅಶ್ವಿನ್ ರಾಜು ಡಿ.ಕೆ. ಅವರಿಗೆ ಸನ್ಮಾನ :
     ಜಪಾನ್‍ನಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ರಾಡಾರ್ ಟೆಕ್ನೋಲಜಿ ಮಹಾ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧೀಕರಿಸಿ ಪ್ರಬಂಧ ಮಂಡಿಸಿದ ಯುವ ವಿಜ್ಞಾನಿ ಅಶ್ವಿನ್ ರಾಜು ಡಿ.ಕೆ. ದರ್ಬೆತ್ತಡ್ಕ ಅವರನ್ನು ಶಾಲು ಹೊದೆಸಿ ಫಲಫುಷ್ಪ, ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ತಂತ್ರಜ್ಞಾನವು ದಿನೇ ದಿನೇ ಅಭಿವೃದ್ಧಿಯನ್ನು ಕಾಣುತ್ತಿದ್ದು, ರಾಡಾರ್‍ನ ಮೂಲಕ ಪ್ರಕೃತಿಯ ಸಮತೋಲವನ್ನು ಮೊದಲೇ ನಾವು ಗ್ರಹಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಮೊಬೈಲ್ ಮೂಲಕವೇ ಎಲ್ಲಾ ವಿಚಾರಗಳನ್ನು ಪಡೆದುಕೊಳ್ಳಲು ರಾಡಾರ್ ತಂತ್ರಜ್ಞಾನ ಪ್ರಗತಿಯಲ್ಲಿದೆ ಎಂದು ತಿಳಿಸಿದ ಅವರು ಸಂಘಟನೆಯ ಚಟುವಟಿಕೆಗಳಗೆ ಮೆಚ್ಚುಗೆಯನ್ನು ಸೂಚಿಸಿದರು.
      ಹಿರಿಯರಾದ ಶ್ಯಾಮ ಸಿ.ಎಚ್., ಕೃಷ್ಣ ಡಿ., ರಾಮಪ್ಪ ಮಂಜೇಶ್ವರ, ಕೋಶಾಧಿಕಾರಿ ಕೃಷ್ಣದಾಸ್ ಡಿ., ಕಾಸರಗೋಡು ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಬಾಬು ಯು.ಪಚ್ಲಂಪಾರೆ, ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಬಾಬು ಬಂದ್ಯೋಡು, ಬದಿಯಡ್ಕ ಅಂಬೇಡ್ಕರ್ ವಿಚಾರವೇದಿಕೆಯ ಸದಸ್ಯ ನಾರಾಯಣ ಬಾರಡ್ಕ, ಚಂದ್ರಶೇಖರ ಕುಂಬಳೆ, ಐತ್ತಪ್ಪ ಚೆನ್ನೆಗುಳಿ, ಜಯರಾಮಪ್ಪ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಮೊಗೇರ ಸಾಂಸ್ಕøತಿಕ ಅನನ್ಯತೆ ಹಾಗೂ ಸ್ಥಿತ್ಯಂತರಗಳು ಎಂಬ ವಿಚಾರದಲ್ಲಿ ಸುಂದರ ಬಾರಡ್ಕ, ಮದರು ಇತಿಹಾಸ ಹಾಗೂ ವರ್ತಮಾನ ಎಂಬ ವಿಚಾರದಲ್ಲಿ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪನ್ಯಾಸವನ್ನು ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ.ಧರ್ಬೆತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು. ರಾಮಪಟ್ಟಾಜೆ, ಗೋಪಾಲ ದರ್ಬೆತ್ತಡ್ಕ ನಿರೂಪಿಸಿದರು. ಲೀಲಾ ಪಟ್ಟಾಜೆ ಪ್ರಾರ್ಥನೆ ಹಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries