ಕುಂಬಳೆ: ಸುಂದರ ಪ್ರಕೃತಿ, ಕಡಲು, ಆಕಾಶಗಳಂತಹ ಸಹಜತೆಗಳು ಕವಿ ಮನಸ್ಸನ್ನು ಪ್ರೇರೇಪಿಸಿ ಅಕ್ಷರಗಳ ಪೋಣಿಸುವಿಕೆಗೆ ವಿಶಿಷ್ಟತೆ ಒದಗಿಸುತ್ತದೆ. ಆದರೆ ಇಂದಿನ ಸಂದಿಗ್ದ ಸಮಾಜದಲ್ಲಿ ಸಂಭ್ರಮದ ಮನೋಸ್ಥಿತಿ ಇಲ್ಲದಿರುವುದು ಆತಂಕಕಾರಿ. ನಶಿಸುತ್ತಿರುವ ಪ್ರಕೃತಿ, ಬಿರುಗಾಳಿಗೆ ಸಿಲುಕಿರುವ ಕಡಲ ಅಬ್ಬರ ಕಾವ್ಯದ ವಸ್ತುವಾಗಿ ಭಿನ್ನ ಹಾದಿ ಹಿಡಿದಿದೆ. ಸಾಮಾಜಿಕ ಸಮಸ್ಯೆ, ಜನಜೀವನಗಳು ಕಾವ್ಯಗಳ ವಸ್ತುವಾಗಿ ನೆಮ್ಮದಿಯ ವ್ಯವಸ್ಥೆಗೆ ರೂಪುನೀಡಿದಾಗ ಕವಿತೆ ವಿಜ್ರಂಭಿಸುತ್ತದೆ ಎಂದು ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಸ್ವಾಮಿ.ನಾ.ಕೋಡಿಹಳ್ಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಗ್ರಾಮದಲ್ಲಿ ನಡೆದ ಏಳನೆ ಕೇರಳ ರಾಜ್ಯಮಟ್ಟದ ಕನ್ನಡ ಸಮ್ಮೇಳನದ ಅಂಗವಾಗಿ ಭಾನುವಾರ ನಡೆದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮರಣಾರ್ಥ ಅಂತರ್ ರಾಜ್ಯ ಮಟ್ಟದ ಕಾವ್ಯ ಪ್ರರ್ಸಥಾನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡು ವರ್ತಮಾನದಲ್ಲಿ ತೀವ್ರ ಪ್ರಮಾಣದ ಭಾಷಿಕ ಸಮಸ್ಯೆಯಿಂದ ತೊಳಲಾಡುತ್ತಿದೆ. ಇಂತಹ ಸಮಸ್ಯೆಗಳು ಆಂತರ್ಯದ ಧ್ವನಿಯಾಗಿ ಕಾವ್ಯವಾಗಿಸಬೇಕು. ನಿತ್ಯ ಬದುಕಿನ ಘಟನೆಗಳನ್ನೇ ಕಾವ್ಯವಾಗಿಸುವಲ್ಲಿ ಕವಿಮನಸ್ಸು ಭಾವುಕತೆ, ನಿರಾಸೆಗೊಳಗಾಗದೆ ಸಮಚಿತ್ತದಿಂದ ನವಭಾಷ್ಯದ ಭಾಷೆಯನ್ನು ಕಡೆದು ಕಟ್ಟುವ ಮೂಲಕ ರೂಪಾತ್ಮಕಗೊಳಿಸಬೇಕು.ಕವಿಯಾಗಿ ವಿಜ್ರಂಭಿಸುವುದಕ್ಕಿಂತ ಕವಿತೆಯಾಗಿ ಧ್ವನಿಸಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಆಶಯ ಭಾಷಣಗೈದು ಮಾತನಾಡಿ ಕಾವ್ಯ ಕಟ್ಟುವ ಯುವಕವಿಗಳು ಕವಿತೆಯ ಸ್ವರೂಪ, ವಿಸ್ತಾರತೆಯ ಬಗ್ಗೆ ಜ್ಞಾನ ಸಂಪನ್ನನಾಗಿರಬೇಕು. ಗಡಿನಾಡಿನ ಸವಾಲುಗಳಿಗೆ ಶಕ್ತಿಯುತ ಅಕ್ಷರ ಕ್ರಾಂತಿಗೆ ಕಾವ್ಯ ಕಾರಣವಾಗಿರಬೇಕು ಎಂದರು. ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲದ ಸಂಚಾಲಕ ಸುಭಾಶ್ ಪೆರ್ಲ, ಸಮ್ಮೇಳನದ ಸರ್ವಾಧ್ಯಕ್ಷ, ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು, ಕರಾವಳಿ ಸಾಂಸ್ಕøತಿಕ ಪ್ರತಿರ್ಷಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆ, ಶಶಿಕಲಾ ಕುಂಬಳೆ, ಪ್ರಭಾವತಿ ಕೆದಿಲಾಯ ಪುಂಡೂರು, ಪ್ರಮೀಳಾ ಚುಳ್ಳಿಕ್ಕಾನ, ಚೇತನಾ ಕುಂಬಳೆ, ಪರಿಣಿತ ರವಿ ಎಡನಾಡು, ರವೀಂದ್ರನ್ ಪಾಡಿ, ನರಸಿಂಹ ಭಟ್ ಏತಡ್ಕ, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಆನಂದ ರೈ ಅಡ್ಕಸ್ಥಳ, ಮೊಹಮ್ಮದ್ ಶಿಂಶಾದುಲ್‍ಹಕ್ ಆರ್ಲಪದವು, ನಿರ್ಮಲಾ ಸೇಸಪ್ಪ ಖಂಡಿಗೆ, ಶ್ವೇತಾ ಕಜೆ, ಶಂಕ್ರಮ್ಮ, ಚಿತ್ತರಂಜನ್ ಕಡಂದೇಲು, ಋತಿಕ್, ತೃಶಿಕಾ, ಯಶಸ್, ಅರ್ಚನ, ಅಮೂಲ್ಯ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಜಗದೀಶ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ದಿವಾಕರ್ ವಂದಿಸಿದರು.





