ಕುಂಬಳೆ: ಹೊಸನಗರದ ಶ್ರೀ ರಾಮಚಂದ್ರಾಪುರಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗುಂಪೆ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸಂಸ್ಥೆಯ ಅಭಿವೃದ್ಧಿಗಾಗಿ ವಿಶೇಷ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಗೋಕರ್ಣದಲ್ಲಿ ಆರಂಭವಾಗಲಿರುವ ವಿಷ್ಣುಗುಪ್ತ ವಿಶ್ವವಿದ್ಯಾನಿಲಯದ ಕುರಿತು ಮುಳ್ಳೇರಿಯ ಹವ್ಯಕ ಮಂಡಲದ ವಿಶೇಷ ಆಹ್ವಾನಿತರೊಂದಿಗಿನ ಸಂವಾದ ಕಾರ್ಯಕ್ರಮಕ್ಕಾಗಿ ಶ್ರೀಗಳು ಧರ್ಮತ್ತಡ್ಕಕ್ಕೆ ಆಗಮಿಸಿದ್ದರು. ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ನೇರೋಳು ಶಂಕರನಾರಾಯಣ ಭಟ್ ಫಲಸಮರ್ಪಣೆ ಮಾಡಿ ಶ್ರೀಗಳನ್ನು ಬರಮಾಡಿಕೊಂಡರು. ಹೈಯರ್ ಸೆಕೆಂಡರಿಯ ಪ್ರಾಂಶುಪಾಲ ನೇರೋಳು ರಾಮಚಂದ್ರ ಭಟ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಇ.ಯಚ್.ಗೋವಿಂದ ಭಟ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನೇರೋಳು ಮಹಾಲಿಂಗ ಭಟ್ ಅವರು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ವಿವಿಧ ವಿಭಾಗ ಪದಾಧಿಕಾರಿಗಳಾದ ವೈ.ವಿ.ಕೃಷ್ಣಮೂರ್ತಿ, ಬಳ್ಳಮೂಲೆ ಗೋವಿಂದ ಭಟ್, ಮೊಗ್ರ ಸತ್ಯನಾರಾಯಣ ಭಟ್, ಕೇಶವ ಪ್ರಸಾದ ಎಡಕ್ಕಾನ, ಕಕ್ವೆ ಶಂಕರ್ ರಾವ್, ಮಹಾ ಮಂಡಲ,ಮಂಡಲ,ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆಯ ಉನ್ನತಿಗಾಗಿ ಅಹೋರಾತ್ರೆ ಶ್ರಮಿಸಿದ್ದ ದಿ.ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟರನ್ನು ಶ್ರೀಗಳು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಶ್ರೀಗಳು ಸಂಸ್ಥೆಯ ಉನ್ನತಿಗಾಗಿ ಮಂತ್ರಾಕ್ಷತೆ ಅನುಗ್ರಹವನ್ನಿತ್ತು ಹರಸಿದರು. ವಿದ್ಯಾಸಂಸ್ಥೆಯ ಸಂಚಾಲಕಿ ಶಾರದ ಅಮ್ಮ ನೇರೋಳು ಅವರು ಉಪಸ್ಥಿತರಿದ್ದರು.




