ನವದೆಹಲಿ: ವಿಶ್ವದಾದ್ಯಂತ ಕೊರೋನವೈರಸ್ ಏಕಾಏಕಿ ಉಲ್ಪಣಿಸುತ್ತಿದ್ದು, ಭಾರತದಲ್ಲಿ ಈ ವರೆಗೂ ಮಾರಕ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬ್ರಸೆಲ್ಸ್ ಭೇಟಿ ಕೂಡ ರದ್ದಾಗಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, 'ವಿಶ್ವದಾದ್ಯಂತ ಕೊರೋನವೈರಸ್ ಏಕಾಏಕಿ ಉಲ್ಪಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ಭೇಟಿ ರದ್ದಾಗಿದೆ. ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆಗೆ ಪ್ರಧಾನಿ ಮೋದಿ ಹಾಜರಾಗಬೇಕಾಗಿತ್ತು. ಆದರೆ, ಸದ್ಯ ಪ್ರಯಾಣ ಬೆಳೆಸದಂತೆ ಎರಡೂ ದೇಶಗಳ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗಸಭೆಯನ್ನು ಪರಸ್ಪರ ಅನುಕೂಲಕರ ದಿನಾಂಕದಂದು ಮರು ನಿಗದಿಪಡಿಸಲು ನಿರ್ಧರಿಸಲಾಗಿದೆ' ಎಂಬುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಿನ ನಿಕಟ ಸಹಕಾರದ ಸ್ಫೂರ್ತಿಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಐರೋಪ್ಯ ದೇಶಗಳು ಜಾಗತಿಕ ಆರೋಗ್ಯದ ಬಗ್ಗೆ ಸಮಾಣ ಕಾಳಜಿ ಮತ್ತು ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಮತ್ತು ಸೋಂಕು ಶೀಘ್ರವೇ ನಿಯಂತ್ರಣಕ್ಕೆ ಬರಲೆಂದು ಆಶಿಸುತ್ತವೆ ಎಂದು ಅವರು ಹೇಳಿದ್ದಾರೆ. ಐರೋಪ್ಯ ಆಯೋಗ, ಐರೋಪ್ಯ ಮಂಡಳಿ ಮತ್ತು ಐರೋಪ್ಯ ಸಂಸತ್ ಸೇರಿದಂತೆ ಅದರ ಅನೇಕ ಸಂಸ್ಥೆಗಳಿಗೆ ಬ್ರಸೆಲ್ಸ್ ನೆಲೆಯಾಗಿದೆ. ಐರೋಪ್ಯ ಸಂಸತ್ತು ಈಗಾಗಲೇ ಬ್ರಸೆಲ್ಸ್ ಮತ್ತು ಸ್ಟ್ರಾಸ್‍ಬರ್ಗ್‍ನಲ್ಲಿನ ತನ್ನ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಬರ್ಂಧಿಸಲಾಗಿದೆ. ಮಾರಣಾಂತಿಕ ವೈರಸ್ ಇದುರವರೆಗೆ ವಿಶ್ವದಾದ್ಯಂತ ಸುಮಾರು 3,200 ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾದ ವುಹಾನ್‍ನಲ್ಲಿ ಮೊದಲು ಉಲ್ಬಣಗೊಂಡ ನಂತರ ವಿಶ್ವದಾದ್ಯಂತ 90,000 ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ.
ಉತ್ತರ ಪ್ರದೇಶಕ್ಕೂ ಹಬ್ಬಿದ ಕೊರೋನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ
ಉತ್ತರ ಪ್ರದೇಶದ ಘಾಜಿಯಾಬಾದ್?ನಲ್ಲಿ ವ್ಯಕ್ತಿಯೋರ್ವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ರಾಜಧಾನಿ ದೆಹಲಿ, ಕೇರಳ, ಜೈಪುರ ಮತ್ತು ಹೈದರಾಬಾದ್ ನಲ್ಲೂ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ 30 ಸೋಂಕಿತರ ಪೈಕಿ 16 ಮಂದಿ ಇಟಲಿಯಿಂದ ಬಂದ ಪ್ರವಾಸಿಗರಾಗಿದ್ದು, ಕೇರಳದ ಮೂವರು ಸೋಂಕಿತರು ಗುಣಮುಖರಾಗಿದ್ದಾರೆ. ಮಾರಣಾಂತಿಕ ವೈರಸ್?ಗೆ ಜಗತ್ತಿನಾದ್ಯಂತ ಸುಮಾರು 3,300 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 92 ಸಾವಿರ ಗಡಿ ದಾಟಿದೆ.





