ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಕೊರೊನಾ ವೈರಸ್‌ನಿಂದಾಗಿ dateಉ ಅತಿ intimateಉ ಆದ ರೋಚಕ ಪ್ರಸಂಗವು!
ಸ್ವಚ್ಛ ಭಾಷೆ ಅಭಿಯಾನದಲ್ಲಿ, ಶಿಷ್ಟ(formal) ಬರವಣಿಗೆಯಲ್ಲಿ ಬಳಕೆಯಾಗುವ ಭಾಷೆಯ ಬಗ್ಗೆಯಷ್ಟೇ, ಅದರಲ್ಲೂ ಕನ್ನಡ ಭಾಷೆಯ ಬಗ್ಗೆಯಷ್ಟೇ ಹೆಚ್ಚು ಗಮನ ಕೊಡುತ್ತಿರುವುದು. ಈ ಅಭಿಯಾನವನ್ನು ಆರಂಭಿಸಿದ ಉದ್ದೇಶವೂ ಅದೇ. ಆದರೆ ಸಂದರ್ಭೋಚಿತವಾಗಿ ಕನ್ನಡೇತರ ಭಾಷೆಗಳ ವಿಚಾರವನ್ನೂ ಆಗೊಮ್ಮೆ ಈಗೊಮ್ಮೆ ಇಲ್ಲಿ ಪ್ರಸ್ತಾವಿಸುವುದುಂಟು. ಇದೀಗ ವಿಶ್ವವ್ಯಾಪಿ ದಾಂಧಲೆಯೆಬ್ಬಿಸಿರುವ Corona ವೈರಸ್‌ನ ಹೆಸರನ್ನು ಕನ್ನಡದ ಕೆಲವು ದಿನಪತ್ರಿಕೆಗಳೂ ಸೇರಿದಂತೆ ಅನೇಕರು ‘ಕರೋನಾ’ ಎಂದು ಬರೆಯುತ್ತಿದ್ದಾರೆ. ಅದು ‘ಕೊರೊನಾ’ ಎಂದಾಗಬೇಕು. ಮೂಲ ಲ್ಯಾಟಿನ್ ಭಾಷೆಯಲ್ಲಿ Corona ಪದಕ್ಕೆ ಎರಡು ಅರ್ಥಗಳು: ಅ) Wreath. ಸಮಾಧಿಯ ಮೇಲಿಡಲು ಹೂವುಗಳನ್ನು ವೃತ್ತಾಕಾರದಲ್ಲಿ ಪೋಣಿಸಿದ ರಚನೆ. ಆ) Crown: ಪಟ್ಟಾಭಿಷೇಕದ ವೇಳೆ ಹೊಸ ರಾಜನ ತಲೆಯ ಮೇಲಿಡುವ ಕಿರೀಟ. Coronate/ coronation (ಕಿರೀಟಧಾರಣೆ, ಪಟ್ಟಾಭಿಷೇಕ) ಎಂಬ ಪದ ಬಂದಿರುವುದು ಅದರಿಂದಲೇ. ಸೂರ್ಯ ಮತ್ತು ಇತರ ನಕ್ಷತ್ರಗಳ ಸುತ್ತ ಅನಿಲಗಳಿಂದಾಗುವ ವೃತ್ತರಚನೆಯನ್ನೂ corona ಎನ್ನುತ್ತೇವೆ. ದತ್ತೂರ ಪುಷ್ಪ, ಡ್ಯಾಫೊಡಿಲ್ ಹೂವಿನಂಥವು ತುತ್ತೂರಿ ಆಕೃತಿಯಲ್ಲಿ ಅರಳುವುದಕ್ಕೂ ಸಸ್ಯಶಾಸ್ತ್ರದಲ್ಲಿ corona ಎಂಬ ಪದಬಳಕೆ ಇದೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಈ ವೈರಸ್‌ನ ರಚನೆ ಒಂದು ಕಿರೀಟದಂತೆ ಕಾಣುವುದರಿಂದ Corona ಎಂದು ಹೆಸರು.
ಮೊನ್ನೆ ಬೆಂಗಳೂರು ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ನಿರ್ದೇಶಕರು ಕಾಲೇಜುಗಳ ಪ್ರಿನ್ಸಿಪಾಲರನ್ನುದ್ದೇಶಿಸಿ ಒಂದು ಸುತ್ತೋಲೆ ಪ್ರಕಟಿಸಿದ್ದಾರೆ. ಅದನ್ನು ಇಂಗ್ಲಿಷ್‌ನಲ್ಲಿ ಯಥಾವತ್ತಾಗಿ ಇಲ್ಲಿ ದಾಖಲಿಸುತ್ತಿದ್ದೇನೆ: “Dear Sir/Madam, Postpone Bangalore University Inter Collegiate Kabaddi (Men) Tournament due to corona virus. Date will be intimate."
ಒಂದುಕಡೆ ಕೊರೊನಾ ವೈರಸ್ ಹರಡದಂತೆ social distancingಗೆ ಹೆಚ್ಚು ಪ್ರಾಮುಖ್ಯ ಕೊಡುವುದು (ಅದಂತೂ ಒಳ್ಳೆಯದೇ), ಇನ್ನೊಂದೆಡೆ date will be intimate ಎನ್ನುವುದು! ಯಾರ ಡೇಟು (ಕಬಡ್ಡಿ ಆಟಗಾರರ ಪ್ರೇಯಸಿಯರೇ?) ಇಂಟಿಮೇಟು ಆಯಿತೋ! ಆ ಇಂಟಿಮೆಸಿಯಿಂದ ಯಾರಿಂದ ಯಾರಿಗೆ ಕೊರೊನಾ ಹರಡಿತೋ!
===
೨. ಎಗ್ಗಿಲ್ಲದೆ ಎಗ್ ಬಿರ್ಯಾನಿ; ಪತ್ರಿಕೆಗಳಿಂದ ಎಗ್ಗಿಲ್ಲದೆ ಕನ್ನಡದ ಖೂನಿ
ಅ) “ಪತ್ರ ಬರೆದ ಮಗನನ್ನು ಕಳೆದುಕೊಂಡ ತಾಯಿ" [ಪ್ರಜಾವಾಣಿ. ೧೬ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು ಬೆಂಗಳೂರಿನಿಂದ ಬಿ.ಕೆ.ಸುಮತಿ]. ಇದು ಬೆಂಗಳೂರು-ಕುಂದಾಪುರ ದುರ್ಗಾಂಬಾ ಬಸ್ಸಿನಲ್ಲಿ ಪ್ರಯಾಣದ ವೇಳೆ ಎದೆನೋವಿನಿಂದ ಬಳಲಿ ಕೊನೆಗೂ ಮೃತಪಟ್ಟ ನತದೃಷ್ಟ ಹುಡುಗನ ಸುದ್ದಿ. ಮಗನನ್ನು ಕಳೆದುಕೊಂಡ ತಾಯಿಯು ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ಅಂದರೆ ಪತ್ರ ಬರೆದದ್ದು ಆ ತಾಯಿ. ಆದರೆ ಪ್ರಜಾವಾಣಿಯ ಪ್ರಕಾರ ಮಗನೇ ಪತ್ರ ಬರೆದದ್ದು! ಪತ್ರ ಬರೆದಿದ್ದರಿಂದಾಗಿ ಆತ ಸಾವನ್ನಪ್ಪಬೇಕಾಯ್ತೇನೋ ಎಂದು ಅನುಮಾನ ಬರುವಂತಹ ವಾಕ್ಯರಚನೆ. “ತಪ್ಪು ವಾಕ್ಯ ಬರೆದ ಪತ್ರಕರ್ತನನ್ನು ಕಳೆದುಕೊಂಡ ಪ್ರಜಾವಾಣಿ" ಎನ್ನುವಂತಾದರೆ ಇಂತಹ ಅಬದ್ಧಗಳು ಸ್ವಲ್ಪವಾದರೂ ಕಡಿಮೆಯಾಗಬಹುದು.
ಆ) “ಉದ್ಯೋಗಾವಕಾಶ ಹೆಚ್ಚಿಸಿದ ಸೈಬರ್ ಕ್ರೈಂ" [ವಿಜಯವಾಣಿ. ೧೮ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು ವಸಂತ ಕಜೆ]. ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಎಂದ ಕನಕದಾಸರಿಗೂ ಗೊಂದಲವಾದೀತು ಈ ಶೀರ್ಷಿಕೆಯನ್ನು ನೋಡಿದರೆ. “ಪತ್ನಿ ಕೊಂದ ಪತಿ" ರೀತಿಯ ಶೀರ್ಷಿಕೆ ಬರೆಯುವಾಗ (ವಿಜಯವಾಣಿಯಲ್ಲೇ ೭ಮಾರ್ಚ್೨೦೨೦ರ ಸಂಚಿಕೆಯಲ್ಲಿ ಬಂದ ಶೀರ್ಷಿಕೆ) ಅದು “ಪತ್ನಿಯನ್ನು ಕೊಂದ ಪತಿ" ಎಂದು ಓದುಗರು ಅರ್ಥೈಸಬೇಕೆಂದು ವಿಜಯವಾಣಿ ಬಯಸುತ್ತದೆ. ಹಾಗಾದರೆ "ಉದ್ಯೋಗಾವಕಾಶ ಹೆಚ್ಚಿಸಿದ ಸೈಬರ್ ಕ್ರೈಂ" ಎಂಬ ವಾಕ್ಯವನ್ನು ಓದುಗರು "ಉದ್ಯೋಗಾವಕಾಶವನ್ನು ಹೆಚ್ಚಿಸಿದ ಸೈಬರ್ ಕ್ರೈಂ" ಎಂದೇ ಅರ್ಥೈಸಿಕೊಳ್ಳಬೇಕು ತಾನೆ? ಅದು ಸರಿಯೇ? ತಂತ್ರಜ್ಞಾನ ಬಳಕೆ ಹೆಚ್ಚಿದ್ದರಿಂದ ಸೈಬರ್ ಕ್ರೈಂ ಹೆಚ್ಚಾಗಿರುವುದು; ಅದನ್ನು ತಡೆಗಟ್ಟುವ ಕೌಶಲವುಳ್ಳವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿರುವುದು. ಅಂದಮಾತ್ರಕ್ಕೇ "ಉದ್ಯೋಗಾವಕಾಶ ಹೆಚ್ಚಿಸಿದ ಸೈಬರ್ ಕ್ರೈಂ" ಎಂದು ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಿದರೆ ಎಲ್ಲರೂ ಸೈಬರ್ ಕ್ರೈಂ ಮಾಡುವುದಕ್ಕೆ ಆಕರ್ಷಿತರಾಗಬಹುದೇ ವಿನಾ ಅದನ್ನು ತಡೆಗಟ್ಟುವುದಕ್ಕೆ ಅಲ್ಲ. ತಲೆಬರಹ ಕೊಡುವಾಗ ತಲೆ (ಇದ್ದರೆ) ಉಪಯೋಗಿಸಬೇಕು.
ಇ) “ಈಶ್ವರಪ್ಪ ಅವರ ರಾತ್ರಿ ಸರ್ಕಾರಿ ಬಂಗಲೆಯ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈಶ್ವರಪ್ಪ ಮತ್ತು ಅವರ ಪತ್ನಿ ಜಯಲಕ್ಷ್ಮಿ ಅವಘಡದಿಂದ ಪಾರಾಗಿದ್ದಾರೆ." [ಸಂಜೆವಾಣಿ. ೧೭ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ಭರದ್ವಾಜ ಸೆಲ್ಲಪ್ಪನ್]. ಮಂತ್ರಿಗಳಿಗೆ ಸರ್ಕಾರದ ವತಿಯಿಂದ ಹಗಲಿಗೆ ಒಂದು ಮತ್ತು ರಾತ್ರಿಗೆ ಮತ್ತೊಂದು ಬಂಗಲೆ ನೀಡುವರೇ? ಈ ಸುದ್ದಿ ನೋಡಿದವರಿಗೆ ಅನುಮಾನ ಬರುವುದು ಸಹಜ! ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ‘ಅವಘಡ’ ತಪ್ಪು, ‘ಅವಗಡ’ ಸರಿ. ಅಚ್ಚಕನ್ನಡ ಪದ. ಮಹಾಪ್ರಾಣ ಅಕ್ಷರವಿರುವುದಿಲ್ಲ.
ಈ) “ಬೆಂಗ್ಳೂರಿನಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಶಂಕೆ: ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ" [ಪಬ್ಲಿಕ್ ಟಿವಿ. ೫ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು: ಗಜಾನನ ಪರಮೇಶ್ವರ ಭಟ್]. ನಿಟ್ಟುಸಿರು ಬಿಡುವುದು ಎಂದರೆ ಇಂಗ್ಲಿಷ್‌ನಲ್ಲಿ a sigh of relief ಎಂಬ ಪದಪುಂಜದ್ದೇ ಅರ್ಥ. a feeling of comfort after worrying about something. ಆದರೆ, ಕೊರೊನಾ ಸೋಂಕು ಇದೆಯೆಂಬ ಶಂಕೆ ಉಂಟಾದರೆ ಸಿಲಿಕಾನ್ ಸಿಟಿ ಮಂದಿ ಏಕೆ ನಿಟ್ಟುಸಿರು ಬಿಡುವುರು? ಕೊರೊನಾ ಬರಲೆಂದು ಅವರೇನಾದರೂ ಪ್ರಾರ್ಥಿಸಿದ್ದರೇ?
ಉ) “ಜಿಲ್ಲೆಯ ಮಾಜಿ ದೇವದಾಸಿಯರನ್ನು ಮುಖ್ಯ ವಾಹಿನಿಗೆ ತಂದು ಉಳಿದವರಂತೆ ಬದುಕುವಂತೆ ಮಾಡುವ ನಿಟ್ಟಿನಲ್ಲಿ ಮಾಜಿ ದೇವದಾಸಿಯರ ಹೆಣ್ಣು ಮಕ್ಕಳ ಕಂಕಣಭಾಗ್ಯಕ್ಕೆ ಗುರುವಾರ ನವನಗರದ ಕಲಾಭವನ ಅಕ್ಷರಶಃ ಸಾಕ್ಷಿಯಾಯಿತು." [ಕನ್ನಡಪ್ರಭ. ಬಾಗಲಕೋಟೆ. ೧೪ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು: ಶಂಕರ ಯಂಡಿಗೇರಿ]. ವರದಿಯುದ್ದಕ್ಕೂ ‘ಮಾಜಿ ದೇವದಾಸಿಯರು’ ಎಂದು ಆರೇಳು ಸಲ ಬರೆಯಲಾಗಿದೆ. ಹಾಗೆಂದರೇನರ್ಥವೋ ಆ ಪತ್ರಕರ್ತ ಪರಬ್ರಹ್ಮನಿಗೇ ಗೊತ್ತು.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಪರಿಣತ ಸರಿ. ಒಂದು ವಿಚಾರದಲ್ಲಿ ಸರಿಯಾದ ತಿಳಿವಳಿಕೆಯುಳ್ಳ, ಪಳಗಿದ, ನಿಪುಣ, ನಿಷ್ಣಾತ ಎಂಬ ಅರ್ಥ. ವಿಶೇಷಣ ಪದ. ಅನೇಕರು ಇದನ್ನು ಪರಿಣಿತ ಎಂದು ತಪ್ಪಾಗಿ ಬರೆಯುತ್ತಾರೆ. ಪರಿಣತಿ ಎಂಬ ಪದ ಸಹ ಇದೆ. ಪರಿಪೂರ್ಣತೆ, ಚೆನ್ನಾಗಿ ತಿಳಿದುಕೊಂಡಿರುವುದು ಎಂಬ ಅರ್ಥ ಈ ಪದಕ್ಕಿದೆ. ಒಂದು ರೀತಿಯಲ್ಲಿ ‘ಪರಿಣತ’ ವಿಶೇಷಣ ಪದದ ಗುಣವಾಚಕ ನಾಮಪದ ರೂಪ ‘ಪರಿಣತಿ’ ಎಂದು ಹೇಳಬಹುದು. ‘ಪರಿಣೀತ’ ಎಂಬ ಇನ್ನೊಂದು ಪದ ಸಹ ಇದೆ, ಮದುವೆಯಾದ ಎಂಬ ಅರ್ಥವುಳ್ಳದ್ದು. ಬಾಳಿನಲ್ಲಿ ಅದೂ ಒಂದು ಪರಿಣತಿ ಅಂತಲೇ ಹೇಳಬಹುದೆನ್ನಿ.
ಆ) ಹೈರಾಣ ಸರಿ. ದಣಿವು, ಬಳಲಿಕೆ, ಕಂಗಾಲಾಗಿರುವಿಕೆ, ಕಂಗೆಟ್ಟಿರುವಿಕೆ, ಕಷ್ಟ, ತೊಂದರೆ ಇತ್ಯಾದಿ ಅರ್ಥಗಳು. ಅರೇಬಿಕ್ ಮತ್ತು ಪಾರ್ಸಿ ಭಾಷೆಗಳಲ್ಲಿರುವ ‘ಹೈರಾನ್’ನಿಂದ ಬಂದದ್ದಿದು. ಕನ್ನಡದಲ್ಲಿ ಹೈರಾಣ ಎಂದು ಬರೆದರೆ ಒಳ್ಳೆಯದು. ‘ಹೈರಾಣು’ ಎಂದು ಕನ್ನಡದ ಟಿಪಿಕಲ್ ‘ಉ’ಕಾರಾಂತ ಪ್ರಯೋಗ (ಬಸ್ಸು, ಮೇಜು, ಬೆಂಚು, ರೈಲು, ಸಾಬೂನು... ಮುಂತಾದವುಗಳಲ್ಲಿದ್ದಂತೆ ) ಬಳಸಿದರೂ ತಪ್ಪೆನ್ನಲಾಗದು.
ಇ) ದುಂದು ವೆಚ್ಚ ಸರಿ. Excessive expenditure, waste ಎಂಬ ಅರ್ಥ. ದುಂಧು ವೆಚ್ಚ ಎಂದು ಮಹಾಪ್ರಾಣಾಕ್ಷರ ಬಳಸಿ ಬರೆದರೆ ತಪ್ಪು.
ಈ) ದುರ್ಭರ ಸರಿ. ತಾಳಲಾಗದ, ಹೊರಲಾಗದ ಎಂಬ ಅರ್ಥ. ಉದಾ: ಹಳ್ಳಿಗಳಲ್ಲಿರುವ ಬಡ ಹಾಗೂ ಅಶಿಕ್ಷಿತ ಹೆಣ್ಣುಮಕ್ಕಳ ದುರ್ಭರ ಬದುಕು. “ಆಸೆ ಮೃಗಜಲವಾದರೆ ಬದುಕು ದುರ್ಭರ". ಇದನ್ನು ದುರ್ಬರ, ಧುರ್ಬರ ಅಂತೆಲ್ಲ ಬರೆಯುವುದು ತಪ್ಪು.
ಉ) ನಿರ್ಲಕ್ಷ್ಯ ಸರಿ. ಕಡೆಗಣನೆ, ಗಮನ ಕೊಡದಿರುವಿಕೆ ಎಂಬ ಅರ್ಥ. ಲಕ್ಷ್ಯ ಇಲ್ಲದ್ದು ನಿರ್ಲಕ್ಷ್ಯ. ಆದರೆ ಪ್ರಮುಖ ದಿನಪತ್ರಿಕೆಗಳೂ ಸೇರಿದಂತೆ ಹೆಚ್ಚಿನವರೆಲ್ಲ ಇದನ್ನು ‘ನಿರ್ಲಕ್ಷ’ ಎಂದೇ ಬಳಸುತ್ತಿದ್ದಾರೆ!





