ಕಾಸರಗೋಡು: ಅಮೇರಿಕಾದಲ್ಲಿ 45 ನಿಮಿಷದಲ್ಲಿ ಕೋವಿಡ್ 19 ವೈರಸ್ ರೋಗ ಪತ್ತೆ ಹಚ್ಚಲಿರುವ ವಿಶೇಷ ಸಂಶೋಧನೆಗೆ ಕಳೆದ ವಾರ ಅಲ್ಲಿಯ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್(ಎಫ್ಡಿಎ) ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಂಶೋಧನೆಯನ್ನು ಕೈಗೆತ್ತಿಕೊಂಡ ತಜ್ಞರ ತಂಡದ ಉಸ್ತುವಾರಿಯನ್ನು ವಹಿಸಿದವರು ಕಾಸರಗೋಡು ಪೆರಿಯದ ಚೈತ್ರ ಸೀಸನ್ ಎಂಬ ಯುವ ಅಭಿಯಂತರೆ.
ಕ್ಯಾಲಿಪೋರ್ನಿಯ ಕೇಂದ್ರವಾಗಿರುವ ಜೆಫೈಡ್ ಎಂಬ ಸಂಸ್ಥೆಯ ಬಯೋ ಮೆಡಿಕಲ್ ಅಭಿಯಂತರರಾಗಿ ಚೈತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಕಾಂಗ್ರೆಸ್ಸ್ ನೇತಾರ ವಿ.ಗಂಗಾಧರನ್ ನಾಯರ್ ಅವರ ಮೊಮ್ಮಗಳು ಚೈತ್ರ.
ಪ್ರಸ್ತುತ ಕೋವಿಡ್ 19 ವೈರಸ್ ಪತ್ತೆಗೆ ಒಂದು ದಿನಗಳಿಗಿಂತಲೂ ಹೆಚ್ಚಿನ ಪರಿಶೀಲನೆ ಬೇಕಾಗುತ್ತಿತ್ತು. ಆದರೆ ಚೈತ್ರ ಅವರನ್ನೊಳಗೊಂಡ ತಂಡ ಸಂಶೋಧಿಸಿದ ಹೊಸ ವಿಧಾನದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ರೋಗ ಬಾಧಿತರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗುವುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ಸಂಶೋಧನೆಗೆ ಸಂಬಂಧಿಸಿ ಕೋವಿಡ್ ವೈರಸ್ ಪತ್ತೆಗೆ ವಿಶೇಷ ತರಬೇತಿಯ ಅಗತ್ಯವಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಅತಿ ಸುಲಭವಾಗಿ ಈ ಮೂಲಕ ಪರಿಶೋಧನೆ ಸುಲಭ ಮಾರ್ಗದ ಮೂಲಕ ಸಾಧ್ಯವಾಗುವುದೆಂದೂ ಜೆಪೈಡ್ ಸಂಸ್ಥೆಯ ಅಧ್ಯಕ್ಷ ವಾರನ್ ಕಾಕ್ಮೆಂಡ್ ತಿಳಿಸಿದ್ದಾರೆ. ಆದರೆ ಈ ರೀತಿಯ ಪರಿಶೋಧನೆಗೆ ಎಷ್ಟು ಹಣ ಖರ್ಚು ತಗಲುತ್ತದೆ ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.
ವಿ.ಗಂಗಾಧರನ್ ನಾಯರ್ ಅವರ ಹಿರಿಯ ಪುತ್ರಿ ಅಮೇರಿಕಾದಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಶ್ರೀಜಾ ಹಾಗೂ ಅಮೇರಿಕಾದಲ್ಲಿ ಅಭಿಯಂತರರಾಗಿರುವ ಪಯ್ಯನ್ನೂರು ನಿವಾಸಿ ಸತೀಶ ದಂಪತಿಗಳ ಪುತ್ರಿಯಾಗಿರುವ ಚೈತ್ರ ಕಲಿಕಾ ಪ್ರತಿಭಾನ್ವಿತೆಯಾಗಿ ಅಮೇರಿಕಾ ಅಧ್ಯಕ್ಷರಿಂದ ಈ ಹಿಂದೆ ಚಿನ್ನದ ಪದಕ ವಿಜೇತೆಯಾಗಿದ್ದಾರೆ. ಕ್ಯಾಲಿಪೋರ್ನಿಯ ವಿಶ್ವ ವಿದ್ಯಾನಿಲಯದ ಡೇವಿಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋ ಮೆಡಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುತ್ತಾರೆ. ಇವರ ಸಹೋದರ ಯುಎಸ್‍ಎ ಯಲ್ಲಿ ಪ್ರಸ್ತುತ ಪದವಿ ವ್ಯಾಸಂಗ ನಡೆಸುತ್ತಿದ್ದಾರೆ.