ಬದಿಯಡ್ಕ: ಪೊಲೀಸ್ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಸಿಎಜಿ ವರದಿಯಲ್ಲಿ ಡಿಜಿಪಿಯವರ ವಿರುದ್ಧದ 151 ಕೋಟಿ ರೂಪಾಯಿ ಅವ್ಯವಹಾರ ಹಾಗೂ ಅದರಲ್ಲಿ ಮುಖ್ಯಮಂತ್ರಿಯವರ ಪಾಲ್ಗೊಳ್ಳುವಿಕೆಯ ಕುರಿತು ಸಿಬಿಐ ತನಿಖೆಗೊಳಪಡಿಸಲು ಆಗ್ರಹಿಸಿ ಕಾರಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಬದಿಯಡ್ಕ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಯಿತು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಮ್ಮ ಫಿಲಿಪ್ ಉದ್ಘಾಟಿಸಿ ಮಾತನಾಡಿ ಬೇಲಿಯೇ ಎದ್ದು ಹೊಲವನ್ನು ಮೇಯುವಂತಹ ಪರಿಸ್ಥಿತಿ ನಮ್ಮ ಕೇರಳ ರಾಜ್ಯಕ್ಕೆದುರಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೃಹಖಾತೆಯನ್ನು ಬೇರೆ ಶಾಸಕರಿಗೆ ನೀಡಬೇಕು, ಡಿಜಿಪಿಯವರು ಕೂಡಲೇ ರಾಜೀನಾಮೆಯನ್ನು ನೀಡಬೇಕು. ಸರಕಾರೀ ಕಂಪೆನಿಗಳಿಗೆ ನೀಡಬೇಕಾದ ಗುತ್ತಿಗೆಯನ್ನು ಖಾಸಗಿ ಕಂಪೆನಿಗಳಿಗೆ ನೀಡುತ್ತಿದ್ದಾರೆ. ರಾಜ್ಯವು ಕಂಡ ಅತೀ ಕೆಟ್ಟಿ ಮುಖ್ಯಮಂತ್ರಿ ಇವರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕಾರಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾರರಾದ ಆನಂದ ಕೆ.ಮವ್ವಾರು, ಪುರುಷೋತ್ತಮನ್ ನಾಯರ್, ಕೇಶವ ಮಣಿಯಾಣಿ, ಖಾದರ್ ಮಾನ್ಯ, ವಿನೋದನ್ ನಂಬ್ಯಾರ್, ವೇಣುಗೋಪಾಲ್, ರವಿಮೆಣಸಿನಪಾರೆ, ಅಬ್ಬಾಸ್, ಅನಿತಾ ಕ್ರಾಸ್ತಾ, ಪ್ರಸನ್ನ ಮೊದಲಾದವರು ನೇತೃತ್ವವನ್ನು ನೀಡಿದ್ದರು. ಗಂಗಾಧರ ಗೋಳಿಯಡ್ಕ ಸ್ವಾಗತಿಸಿ, ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ನೀರ್ಚಾಲು ವಂದಿಸಿದರು. ಕಾಂಗ್ರೆಸ್ ಮಂಡಲ ಕಚೇರಿಯಿಂದ ಮೆರವಣಿಗೆಯ ಮೂಲಕ ಪೊಲೀಸ್ ಠಾಣೆಗೆ ಮುತ್ತಿಗೆಯನ್ನು ಹಾಕಲಾಯಿತು.


