ನವದೆಹಲಿ: ಜಾಗತಿಕ ಮಟ್ಟದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿರುವ ಮಾರಕ ರೋಗ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.
ದೇಶದಾದ್ಯಂತ ಇದೀಗ ಯಾರದ್ದೇ ಮೊಬೈಲ್ ಗೆ ಕರೆ ಮಾಡಿದರೂ ಮೊದಲಿಗೆ ವ್ಯಕ್ತಿಯೊಬ್ಬರು ಕೆಮ್ಮುವ ಶಬ್ದ ಕೇಳಿ ಬರುತ್ತದೆ. ನಂತರದಲ್ಲಿ ಕೊರೊನಾ ವೈರಸ್ ಪ್ರಾಥಮಿಕ ಲಕ್ಷಣಗಳು ಏನು, ಈ ಸೋಂಕಿನಿಂದ ಪಾರಾಗಲು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂದೇಶವು ಕೇಳಿ ಬರುತ್ತಿದೆ.
ಮೊಬೈಲ್ ಇಲ್ಲದೇ ಕ್ಷಣಕಾಲವೂ ಜನರು ಜೀವಿಸಲು ಆಗುವುದಿಲ್ಲ ಎನ್ನುವಂತಾ ವಾತಾವರಣ ನಿರ್ಮಾಣವಾಗಿದೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಕಾಲರ್ ಟ್ಯೂನ್ ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಯಾರದ್ದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಜಾಗೃತಿ ಸಂದೇಶವೀಗ ಕೇಳಿ ಬರುತ್ತದೆ.
ಕೇಂದ್ರ ಆರೋಗ್ಯ ಇಲಾಖೆಯ ದಿಟ್ಟ ಹೆಜ್ಜೆ:
ಭಾರತದಲ್ಲಿ ಎಲ್ಲರ ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಂದಾಗಿದೆ. ಕೆಮ್ಮು, ಜ್ವರ, ಶೀತ ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಪ್ರಾಥಮಿಕ ಲಕ್ಷಣಗಳಾಗಿವೆ. ಇಂಥ ಸೋಂಕಿತರು ಪದೇ ಪದೆ ಕಣ್ಣು, ಮೂಗು, ಬಾಯಿ ಹಾಗೂ ಮುಖವನ್ನು ಕೈಗಳಿಂದ ಉಜ್ಜಿಕೊಳ್ಳುವಂತಿಲ್ಲ. ಇದರ ಜೊತೆಗೆ ಸೋಂಕಿತರಿಂದ ಇತರರು ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂಬ ಜಾಗೃತಿ ಸಂದೇಶವು ಮೊಬೈಲ್ ಗಳಲ್ಲಿ ಕೇಳಿ ಬರುತ್ತಿದೆ.


