ಬೆಂಗಳೂರು: ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಾ ಭೀತಿ ಮೂಡಿಸಿರುವ ಕರೋನಾ ವೈರಸ್ ರಾಜಧಾನಿಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಬುಧವಾರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೋನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಏರಿಕೆಯಾಗಿದೆ.
ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗೆ ಐಸೋಲೇಟೆಡ್ ವಾರ್ಡ್ ನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಕಚೇರಿಯ ಅಧಿಕೃತ ಮಾಹಿತಿ ತಿಳಿಸಿದೆ. ಸೋಂಕಿತ ವ್ಯಕ್ತಿ ಮೂಲತಃ ಮುಂಬೈನವನಾಗಿದ್ದು, ಗ್ರೀಸ್ ನಿಂದ ಈ ವ್ಯಕ್ತಿ ಮುಂಬೈಗೆ ಮಾರ್ಚ್ 6 ರಂದು ಬಂದಿದ್ದ. ಬಳಿಕ ಅಲ್ಲಿಂದ ಮಾರ್ಚ್ 8 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡಿದ್ದ.ಮಾರ್ಚ್ 9 ಕ್ಕೆ ಆತ ಬೆಂಗಳೂರಿನಲ್ಲಿ ಕಚೇರಿಗೆ ಹೋಗಿದ್ದು, ಆಗ ಆತ ಕೇವಲ 4 ಜನ ಆತ್ಮೀಯ ಸ್ನೇಹಿತರನ್ನು ಮಾತನಾಡಿಸಿ ಮನೆಗೆ ವಾಪಸ್ ಆಗಿದ್ದ. ಆ ಕಚೇರಿಯಲ್ಲಿ 154 ಉದ್ಯೋಗಿಗಳಿದ್ದಾರೆ. ಆದರೆ ಈತ ಯಾರ ಸಂಪರ್ಕಕ್ಕೂ ಸಿಗದೇ ಕೆಲವೇ ಗಂಟೆಯಲ್ಲಿ ವಾಪಸ್ ಬಂದಿದ್ದ. ಅದೇ ದಿನ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಸಹೋದರ ಮಾತ್ರ ಬೆಂಗಳೂರಿನಲ್ಲಿದ್ದು, ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಪತ್ನಿ, ತಂದೆ, ತಾಯಿ ಎಲ್ಲರೂ ಮುಂಬೈನಲ್ಲಿದ್ದಾರೆ. ಬೆಂಗಳೂರಿಗೆ ಬಂದಾಗ ಆಟೋ ಡ್ರೈವರ್ ಒಬ್ಬರನ್ನು ಕರೆಸಿಕೊಂಡು ಪ್ರಯಾಣ ಮಾಡಿದ್ದ. ಆ ಆಟೋ ಡ್ರೈವರ್ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ. ಹೀಗಾಗಿ ಎಲ್ಲ ರೀತಿಯ ಮಾಹಿತಿ ಕಲೆ ಹಾಕಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರ ಕಚೇರಿ ಮಾಹಿತಿ ನೀಡಿದೆ.


