ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವನಿತಾ ವಿಂಗ್‍ನ ವತಿಯಿಂದ ಬದಿಯಡ್ಕ ವ್ಯಾಪಾರ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪ್ರಸಿದ್ಧ ಆಯುರ್ವೇದ ತಜ್ಞೆ ಡಾ. ಸಪ್ನ ಜಯಗೋವಿಂದ ಉಕ್ಕಿನಡ್ಕ ಅವರು ಮಹಿಳೆಯರಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು. ಘಟಕದ ಅಧ್ಯಕ್ಷೆ ನಿರುಪಮಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಉದ್ಘಾಟಿಸಿದರು. ವನಿತಾ ವಿಂಗ್‍ನ ರಕ್ಷಾಧಿಕಾರಿ ಹಾಗೂ ಘಟಕದ ಕೋಶಾಧಿಕಾರಿ ಬಿ.ಜ್ಞಾನದೇವ ಶೆಣೈ ಶುಭಾಶಂಸನೆಗೈದು ಮಾತನಾಡಿದರು. ಕಾರ್ಯದರ್ಶಿ ಮಂಜುಳಾ ಶೆಣೈ ಸ್ವಾಗತಿಸಿ, ಕೋಶಾಧಿಕಾರಿ ಸತ್ಯವತಿ ವಂದಿಸಿದರು. ಸುನಿತ ಈಶ್ವರಚಂದ್ರಪ್ರಸಾದ್ ನಿರೂಪಿಸಿದರು. ಹಿರಿಯ ವನಿತಾ ವಿಂಗ್ ಸದಸ್ಯರಾದ ಕಮಲಾಕ್ಷಿ ಹಾಗೂ ಜಯಂತಿ ಚೆಟ್ಟಿಯಾರ್ ಅತಿಥಿಗಳಿಗೆ ಶಾಲು ಹೊದೆಸಿ ಗೌರವಿಸಿದರು. ವನಿತಾ ವಿಂಗ್ ಸದಸ್ಯರು ಪಾಲ್ಗೊಂಡಿದ್ದರು.



