ಬದಿಯಡ್ಕ: ಚೇಡಿಕ್ಕಾನ ಚಡ್ಯಾಲ ಶ್ರೀ ಜುಮಾದಿ ದೈವಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಗುಳಿಗನ ಕೋಲ, ರಾತ್ರಿ ಕುತ್ತಿಪೂಜೆ ನಡೆಯಿತು. ಬುಧವಾರ ಬೆಳಗ್ಗೆ ಗಣಪತಿ ಹೋಮ, ಬೆಳ್ಳರ್ಮೆಯಿಂದ ಶ್ರೀ ಚಡ್ಯಾಲ ಜುಮಾದಿ ದೈವದ ಭಂಡಾರ ಆಗಮನ, ಬೆಳಗ್ಗೆ 8.13ರಿಂದ 8.34ರ ಮಧ್ಯೆಯುಳ್ಳ ಶುಭಮುಹೂರ್ತದಲ್ಲಿ ಶ್ರೀ ದೈವದ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಗುಳಿಗ ದೈವದ ಕೋಲ ಹಾಗೂ ಅನ್ನದಾನದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ದೈವಗಳ ತೊಡಂಗಲ್, ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ಕೋಲ ನಡೆಯಿತು. ಗುರುವಾರ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಅರಶಿನ ಹುಡಿ ಪ್ರಸಾದ ವಿತರಣೆ, ಅಣ್ಣಪ್ಪ ದೈವದ ಕೋಲ, ಚಡ್ಯಾಲ ಶ್ರೀ ಜುಮಾದಿ ದೈವದ ನೃತ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರಸಾದ ವಿತರಣೆ, ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.


