ನವದೆಹಲಿ: ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ 17 ರಾಜ್ಯಗಳ 1023 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ದೇಶದಲ್ಲಿ ಇದುವರೆಗೆ 2,902 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದೇಶಾದ್ಯಂತ 68 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು ಹೇಳಿದ್ದಾರೆ. ದೇಶದಲ್ಲಿ ಇದುವರೆಗೆ ಪತ್ತೆಯಾದ ಕೊವಿಡ್-19 ಪ್ರಕರಣಗಳ ಪೈಕಿ ಶೇ.30ರಷ್ಟು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ಅವರು ತಿಳಿಸಿದ್ದಾರೆ.ಶೇ. 9 ರಷ್ಟು 20 ವರ್ಷದೊಳಗಿನವರಿಗೆ, ಶೇ. 42 ರಷ್ಟು 21 ವರ್ಷದಿಂದ 40 ವರ್ಷದೊಳಗಿನವರಿಗೆ, ಶೇ. 33ರಷ್ಟು 41ರಿಂದ 60 ವರ್ಷದೊಳಗಿನವರಿಗೆ ಹಾಗೂ ಶೇ. 17ರಷ್ಟು 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ವೈರಸ್ ತಗುಲಿದೆ ಎಂದು ಅಗರವಾಲ್ ಅವರು ಹೇಳಿದ್ದಾರೆ.
ಜಮಾತ್ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 2,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮಾ. 13ರಿಂದ 15ರವರೆಗೆ ಈ ಸಭೆ ನಡೆದಿತ್ತು. ಇದೀಗ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.


