ಕಾಸರಗೋಡು: ಗುರುವಾರ ಕಾಸರಗೋಡು ಜಿಲ್ಲೆಯಲ್ಲಿ 4 ಮಂದಿಗೆ ಸಹಿತ ರಾಜ್ಯದಲ್ಲಿ ಒಟ್ಟು 12 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಕಣ್ಣೂರು ಜಿಲ್ಲೆ-4, ಮಲಪ್ಪುರಂ-2 ಮತ್ತು ಕೊಲ್ಲಂ-1, ತಿರುವನಂತಪುರ-1 ಹಾಗು ಕಾಸರಗೋಡು ಜಿಲ್ಲೆ-4 ಎಂಬಂತೆ ಕೊರೊನಾ ವೈರಸ್ ಸೋಂಕು ಖಚಿತಪಡಿಸಲಾಗಿದೆ. ಇದೇ ವೇಳೆ 8 ಮಂದಿ ವಿದೇಶಿಯರು ಸಹಿತ 13 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತರಲ್ಲಿ ಒಬ್ಬರು ವಿದೇಶದಿಂದ ಬಂದವರು. ಉಳಿದ 11 ಮಂದಿ ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ಸೋಂಕು ಹರಡಿದೆ.
ಗಂಭೀರ ಸ್ಥಿತಿಯಲ್ಲಿದ್ದ ಇಟೆಲಿ ಮತ್ತು ಯು.ಕೆ.ಯ 8 ಮಂದಿ ವಿದೇಶಿಯರು ಸಹಿತ 13 ಮಂದಿ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಇವರಲ್ಲಿ ಒಬ್ಬರು ತಿರುವನಂತಪುರ ಮತ್ತು 7 ಮಂದಿ ಎರ್ನಾಕುಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದ ವಿದೇಶಿಯರಲ್ಲಿ 76, 83 ವರ್ಷ ಪ್ರಾಯದವರೂ ಇದ್ದಾರೆ.
ರಾಜ್ಯದಲ್ಲಿ ಇದು ವರೆಗೆ 357 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಇದೀಗ ಆಸ್ಪತ್ರೆಗಳಲ್ಲಿ 258 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ ರಾಜ್ಯದಲ್ಲಿ 97 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಗುರುವಾರ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ 153 ಮಂದಿಯನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 136195 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 135472 ಮಂದಿ ಮನೆಗಳಲ್ಲೂ, 723 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 157 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ.
12710 ಸ್ಯಾಂಪಲ್ ಪರಿಶೀಲನೆಗೆ ಕಳುಹಿಸಿದ್ದು, 11469 ಮಂದಿಗೆ ರೋಗ ಇಲ್ಲವೆಂದು ಫಲಿತಾಂಶ ಲಭಿಸಿದೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಶೇ.7.5, 20 ವರ್ಷಕ್ಕಿಂತ ಕೆಳ ಹರೆಯದರು ಶೇ.6.9 ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ನಾಲ್ಕು ದಿನಗಳಲ್ಲಿ ಇನ್ನೂ ನಾಲ್ಕು ಲ್ಯಾಬ್ ಲಭಿಸಲಿದೆ. 14 ಜಿಲ್ಲೆಗೆ 14 ಲ್ಯಾಬ್ ಉದ್ದೇಶಿಸಲಾಗಿದೆ. ಕಾಸರಗೋಡು ಗಡಿಯ ಮೂಲಕ ಕರ್ನಾಟಕಕ್ಕೆ ರೋಗಿಗಳಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಗುರುವಾರ ಚಿಕಿತ್ಸೆ ಲಭಿಸದೆ ಒಬ್ಬರು ಸಾವಿಗೀಡಾಗಿದ್ದಾರೆ. ಈ ಪರಿಸ್ಥಿತಿ ಬರದಂತೆ ರೋಗಿಗಳನ್ನು ರಾಜ್ಯದ ಪ್ರಮುಖ ಆಸ್ಪತ್ರೆಗಳಿಗೆ ಕೊಂಡೊಯ್ಯಲು ಶ್ರಮಿಸುವುದಾಗಿಯೂ, ಅಗತ್ಯ ಬಂದಲ್ಲಿ ಹೆಲಿಕಾಪ್ಟರ್ ಬಳಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಯು.ಎಸ್.ನಲ್ಲಿ ಮತ್ತೆ ಮೂವರ ಸಾವು : ಕೊರೊನಾ ವೈರಸ್ ಸೋಂಕಿತ ಮೂರು ಮಂದಿ ಕೇರಳೀಯರು ಯು.ಎಸ್.ನಲ್ಲಿ ಸಾವಿಗೀಡಾದರು. ತೊಡುಪ್ಪುಳ ನೆಡಿಯಶಾಲಾ ಪುದನ್ ವೀಟಿಲ್ ಮ್ಯಾಥ್ಯೂ ಕೋಶಿ ಅವರ ಪತ್ನಿ ಮರಿಯಮ್ಮ(80), ಪತ್ತನಂತಿಟ್ಟ ಕೊಳಂಜೇರಿ ತೇಕೆದಮಲ ಪೇರ್ಕತ್ ವೀಟಿಲ್ ಲಾಲು ಪ್ರತಾಪ್ ಜೋಸ್(64) ಮತ್ತು ತೃಶ್ಶೂರು ಪಾರಪಟ್ಟಾನಿ ವಿನ್ಸಿ ನಗರದ ಟೆನ್ನಿಸನ್ ಪಯ್ಯೂರು(82) ಸಾವಿಗೀಡಾದರು. ಇದರೊಂದಿಗೆ ಕೊರೊನಾ ವೈರಸ್ ಸೋಂಕಿನಿಂದ ವಿದೇಶ ಮತ್ತು ಅನ್ಯರಾಜ್ಯಗಳಲ್ಲಿ ಸಾವಿಗೀಡಾದವರ ಸಂಖ್ಯೆ 24ಕ್ಕೇರಿತು. ಈ ಪೈಕಿ 15 ಮಂದಿ ಯು.ಎಸ್.ನಲ್ಲಿ ಸಾವಿಗೀಡಾಗಿದ್ದಾರೆ.
ಮುಂಬೈ ಆಸ್ಪತ್ರೆಗೆ ದಾಖಲು : ಮುಂಬೈಯಲ್ಲಿ ಹೊಟೇಲ್ ನಡೆಸುತ್ತಿರುವ ಕಾಸರಗೋಡು ಮಂಗಲ್ಪಾಡಿಯ 63 ರ ಹರೆಯದ ನಿವಾಸಿಯನ್ನು ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಂಬೈಯ ಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಜೊತೆಯಲ್ಲಿರುವ ಇಬ್ಬರು ಮಲಯಾಳಿಗಳ ಸಹಿತ ಐವರು ಹಾಗು ಹತ್ತಿರದ ಕೊಠಡಿಯಲ್ಲಿ ವಾಸಿಸುತ್ತಿದ್ದ 9 ಮಂದಿಯನ್ನು ನಿಗಾದಲ್ಲಿರಿಸಲಾಗಿದೆ.
ಮೆಡಿಕಲ್ ಸರ್ಟಿಫಿಕೆಟ್ ನೀಡಲು ಹೆಚ್ಚುವರಿ ಸೌಲಭ್ಯ :
ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಮೆಡಿಕಲ್ ಸರ್ಟಿಫಿಕೆಟ್ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಲಾಗಿದೆ. ತಲಪ್ಪಾಡಿ ಚೆಕ್‍ಪೆÇೀಸ್ಟ್ ಬಳಿಯ ಸೌಲಭ್ಯಗಳಲ್ಲದೆ ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿ.ಎಚ್.ಸಿ)24 ತಾಸೂ ಮೆಡಿಕಲ್ ಸರ್ಟಿಫಿಕೆಟ್ ನಿಡುವ ಸೇವೆ ಒದಗಿಸುವುದಾಗಿ ಕಾಸರಗೋಡು ಜಿಲ್ಲಾ ಮೆಡಿಕಲ್ ಆಫೀಸರ್(ಹೆಲ್ತ್) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಹೆಚ್ಚುವರಿ ಮಾಹಿತಿಗೆ ಡಾ.ಷೈನಾ, ಮೆಡಿಕಲ್ ಆಫೀಸರ್, ಸಿ.ಎಚ್.ಸಿ. ಮಂಜೇಶ್ವರ (ದೂರವಾಣಿ ಸಂಖ್ಯೆ: 9945560213) ಅವರನ್ನು ಸಂಪರ್ಕಿಸಬಹುದು.


