ಕಾಸರಗೋಡು: ಕೊರೊನಾ ಮಹಾಮಾರಿಯ ಕಾರಣದಿಂದ ತುರ್ತು ಕೋವಿಡ್ ಚಿಕಿತ್ಸೆಗಾಗಿ ಕಾಸರಗೋಡು ತೆಕ್ಕಿಲ್ ನಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾದ ಟಾಟಾ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ಆಸ್ಪತ್ರೆಯ ನಿರ್ಮಾಣಕ್ಕೆ ಆರಂಭದಲ್ಲೇ ಶನಿ ಗ್ರಹಚಾರದ ಕರಿ ನೆರಳು ಅಡರಿದ್ದು ಆಸ್ಪತ್ರೆ ನಿರ್ಮಾಣ ಮೊಟಕುಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.
ಕೊರೊನಾ ಬಾಧಿತರು ಕಾಸರಗೋಡಲ್ಲಿ ಹೆಚ್ಚಳಗೊಳ್ಳುತ್ತಿರುವಂತೆ ದಕ್ಷಿಣ ಕನ್ನಡ ಸಂಪೂರ್ಣ ಗಡಿಗಳನ್ನು ಮುಚ್ಚಿದ ಕಾರಣ ಕಾಸರಗೋಡಿನ ಇತರ ರೋಗಿಗಳ ಸಹಿತ ತುರ್ತು ಚಿಕಿತ್ಸೆಗೆ ಮಂಗಳೂರಿಗೆ ತೆರಳುವುದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಹಿತ ಇತರ ರೋಗ ಚಿಕಿತ್ಸೆಗಾಗಿ ಸರ್ಕಾರದ ಬೇಡಿಕೆಯ ಹಿನ್ನೆಲೆಯಲ್ಲಿ ಟಾಟಾ ಸಮೂಹ ಸಂಸ್ಥೆ ಕಾಸರಗೋಡಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದೆ ಬಂದಿದ್ದು, ತೆಕ್ಕಿಲ್ ನಲ್ಲಿ ಸ್ಥಳ ಗುರುತಿಸಿ ಒಂದೂವರೆ ತಿಂಗಳೊಳಗೆ 540 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಲಾಗಿತ್ತು.
ಆದರೆ ಜಿಲ್ಲೆಯ ಅಭಿವೃದ್ದಿಗೆ ಕರಿನೆರಳಾಗಿರುವ ಎಡ-ಬಲ ರಂಗಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಜಿಲ್ಲೆಯನ್ನು ಅವಗಣಿಸುತ್ತಿರುವ ಮುಂದುವರಿಕೆಯಾಗಿ ಎಡರಂಗದ ಸರ್ಕಾರ ಜಾರಿಗೊಳಿಸುತ್ತಿರುವ ಆಸ್ಪತ್ರೆ ನಿರ್ಮಾಣ ಯೋಜನೆಯನ್ನು ತಡೆಹಿಡಿಯುವ ಉದ್ದೇಶದಿಂದ ಯುಡಿಎಫ್ ಮುಂದಾಗಿದ್ದು, ಸ್ವತಃ ಕಾಸರಗೋಡು ಶಾಸಕರೇ ಮುಂದೆ ಬಂದು ಆಸ್ಪತ್ರೆ ಕಟ್ಟಡ ನಿರ್ಮಿಸದಂತೆ ಎಚ್ಚರಿಕೆ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಯೋಜನೆ ಏನು:
ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಲೇಜು ಬಳಿಯ 276,277 ಸರ್ವೇ ನಂಬ್ರಗಳಲ್ಲಿ ರುವ 5 ಎಕ್ರೆ ಕಂದಾಯ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 540 ಬೆಡ್, ಐಸೊಲೇಷನ್ ವಾರ್ಡ್ ಗಳು, ಐ.ಸಿ.ಯು. ಸಹಿತದ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿರುವುದು. ಟಾಟಾ ಸಮೂಹ ಸಂಸ್ಥೆ ಕಟ್ಟಡ ನಿರ್ಮಾಣ ನಡೆಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು.
ಏನೀಗ ತಡೆ?
ಶಾಸಕರು ಆಸ್ಪತ್ರೆಗೆ ಒದಗಿಸಲಾದ 5 ಎಕ್ರೆ ನಿವೇಶನದ ಬಗ್ಗೆ ತಕರಾರು ಎತ್ತಿದ್ದು, ಅದರ ದಾಖಲೆಗಳು ವಿವಾದಿತವಾಗಗಿದೆ ಎಂದು ತಿಳಿಸಿ ಕಾಮಗಾರಿ ನಡೆಸದಂತೆ ತಿಳಿಸಿದ್ದಾರೆ. ಅಲ್ಲದೆ ಇತರೆಡೆಗಳಲ್ಲಿ ಸಾಕಷ್ಟು ಸರ್ಕಾರಿ ಭೂಮಿಗಳು ಲಭ್ಯವಿದ್ದರೂ ವಿವಾದಿತ ಪ್ರದೇಶದ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿರುವುದು ರಾಜಕೀಯ ಕಾರಣಗಳಿಂದ ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕರ ಇಂತಹ ನಿರ್ಧಾರದ ಹಿಂದೆ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಕಾಮಗಾರಿಯ ನಿಧಾನ ಗತಿಗೆ ಕಾರಣವಾದಂತಹ ಕಾಣದ ಕೈ ಲಾಬಿ ಮಾಡುತ್ತಿದೆ ಎಂಬ ಮಾತುಗಳು ಇದೀಗ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸದಿರುವುದೂ ಆಸ್ಪತ್ರೆ ನಿರ್ಮಾಣ ತಡೆಗೆ ಕಾರಣವಾಗುವ ಸಾಧ್ಯತೆ ಇದೆಯೆನ್ನಲಾಗಿದೆ.
ಅತ್ತ ಕೇರಳವೂ ಇಲ್ಲ...ಇತ್ತ ಕರ್ನಾಟಕವೂ ಇಲ್ಲ!
ಪ್ರಸ್ತುತ ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಕರ್ನಾಟಕಕ್ಕೂ-ಕೇರಳಕ್ಕೂ ಬೇಡವಾಗಿ ತೊಳಲಾಡುತ್ತಿರುವುದು ಜನಸಾಮಾನ್ಯರಲ್ಲಿ ಆತಂಕದೊಂದಿಗೆ ಹತಾಶೆಗೂ ಕಾರಣವಾಗಿದೆ.



