ಉಪ್ಪಳ: ಕೊರೊನಾ ಸಂಕಷ್ಟದ ಮಧ್ಯೆ ಅತಂತ್ರಗೊಳ್ಳುತ್ತಿರುವ ವ್ಯವಸ್ಥೆಗಳು ದಿನೇದಿನೇ ಹೊಸ ಮಗ್ಗುಲಗಳಿಗೆ ಹೊರಳಿಕೊಳ್ಳುತ್ತಿದ್ದು, ಜನಸಾಮಾನ್ಯರ ಬದುಕು ಕಳವಳಕಾರಿಯಾಗಿ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.
ಪೈವಳಿಕೆ ಸಮೀಪದ ಚಿಪ್ಪಾರು ಅಡ್ಕತ್ತಿಮಾರು ನಿವಾಸಿ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಅವರು ಬೆಳೆಸಿದ ಕ್ವಿಂಟಾಲ್ ಗಟ್ಟಲೆ ಪಪ್ಪಾಯಿ ಹಣ್ಣು ಬೇಡಿಕೆ-ಮಾರುಕಟ್ಟೆಗಳಿಲ್ಲದೆ ನಾಶದಂಚಿಗೆ ತಲಪಿದೆ. ಇದರಿಂದ ಲಕ್ಷಾಂತರ ರೂ.ಗಳ ಆರ್ಥಿಕ ನಷ್ಟದ ಜೊತೆಗೆ ಬಳಸಿದ ಮೂಲಧನವೂ ಕೈತಪ್ಪಿ ಸಂಕಷ್ಟಕ್ಕೊಳಗಾಗಿದ್ದಾರೆ.
ಅಡ್ಕತ್ತಿಮಾರು ಗೋಪಾಲಕೃಷ್ಣ ಭಟ್ ಕಳೆದ 4 ವರ್ಷಗಳಿಂದ ತಮ್ಮ ಎರಡು ಎಕ್ರೆ ಗುಡ್ಡವನ್ನು ಹದಗೊಳಿಸಿ ರೆಡ್‍ಲೇಡಿ ಪಪ್ಪಾಯ ಕೃಷಿ ನಿರ್ವಹಿಸುತ್ತಿದ್ದರು. ಸುಮಾರು 1200 ಪಪ್ಪಾಯಿ ಸಸಿಗಳಲ್ಲಿ ಪ್ರತಿವಾರ 15 ಕ್ವಿಂಟಾಲ್ ಗಳಷ್ಟು ಪಪ್ಪಾಯ ಪಡೆಯುತ್ತಿದ್ದರು. ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕುಂಬಳೆ ಹಾಗೂ ಕಾಸರಗೋಡಿನ ಅಂಗಡಿಗಳಲ್ಲಿ ತಾವೇ ಸ್ವತಃ ಕೊಂಡೊಯ್ದು ಮಾರಾಟಮಾಡುತ್ತಿದ್ದರು. ಆದರೆ ಕೊರೊನಾ ಕಾರಣ ಲಾಕ್‍ಡೌನ್ ಹೇರಲ್ಪಟ್ಟು ಪಪ್ಪಾಯ ಹಣ್ಣುಗಳನ್ನು ವಿಕ್ರಯಿಸಲಾಗದೆ ಕೊಳೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಬೇಡಿಕೆ ಇದ್ದರೂ ಹಣ ನೀಡರು:
ಲಾಕ್‍ಡೌನ್ ಆರಂಭವಾದ ಬಳಿಕ ನಿಯಂತ್ರಣಕ್ಕೊಳಪಟ್ಟ ನಿಗದಿತ ಸಮಯಗಳಲ್ಲಿ ತೆರೆದು ಕಾರ್ಯಾಚರಿಸುವ ತರಕಾರಿ ಅಂಗಡಿಗಳಿಗೆ ಹಣ್ಣುಗಳನ್ನು ತಲಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ಕರ್ತವ್ಯ ನಿರತರಾಗಿರುವ ಪೋಲೀಸರು ತಡೆದು ನಿಲ್ಲಿಸಿ ಪ್ರಯಾಣಕ್ಕೆ ಅಡಿಪಡಿಸುತ್ತಾರೆ. ಅಲ್ಲದೆ ಸಾಕಷ್ಟು ಬೇಡಿಕೆ ಇದ್ದರೂ ವ್ಯಾಪಾರಕ್ಕಾಗಿ ಖರೀದಿಸುವ ಅಂಗಡಿ ವ್ಯಾಪಾರಿಗಳು ಹಲವು ಕಾರಣಗಳನ್ನು ನೀಡಿ ಕಡಿಮೆ ಬೆಲೆಗೆ ಖರೀದಿಸುತ್ತಿರುವುದಾಗಿ ಭಟ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಕನಿಷ್ಠ 20 ರೂ.ಗಳಿಗಾಗದೂ ಖರೀದಿಸಿ ಎಂದು ವಿನಂತಿಸಿದರೂ 15 ರೂ.ಗಳಿಗಿಂತ ಹೆಚ್ಚು ಹಣವನ್ನು ಅಂಗಡಿ ಮಾಲಿಕರು ನೀಡುವುದಿಲ್ಲ. ಆದರೆ ಅಂಗಡಿಗಳಲ್ಲಿ 40 ರಿಂದ 45 ರೂ.ಗಳವರೆಗೂ ಕಿಲೋಗ್ರಾಂ ಒಂದಕ್ಕೆ ಮಾರಾಟಮಾಡುವ ಮೂಲಕ ಕೃಷಿಕರನ್ನು ವಂಚಿಸಲಾಗುತ್ತಿದೆ ಎಂದು ಭಟ್ ಅವರು ತಿಳಿಸಿರುವರು.
ವ್ಯಾಪಾರ ತಂತ್ರಗಾರಿಕೆಯಲ್ಲಿ ಆಸಕ್ತಿ ಇರದ ವ್ಯಾಪಾರ:
ಸಾಮಾನ್ಯವಾಗಿ ಕಾಲಮಾನಕ್ಕನುಸರಿಸಿ ಹೃದಯವಂತರಾಗಿ ವ್ಯಾಪಾರ ಮುನ್ನಡೆಸುವ ಸನ್ಮನಸ್ಸೂ ವ್ಯಾಪಾರಿಗಲ್ಲಿ ಇದ್ದಂತಿಲ್ಲ. ಮೊದಲೇ ಲಾಕ್‍ಡೌನ್ ಕಾರಣ ಎಲ್ಲಾ ವಿಭಾಗದ ಜನರೂ ಉದ್ಯೋಗ, ವ್ಯವಹಾರಗಳಿಲ್ಲದೆ ಹಣಕಾಸಿನ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಂದ ಗರಿಷ್ಠ ಮೊತ್ತಕ್ಕೆ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮಿತ ಬೆಲೆಗೆ ಗ್ರಾಹಕರಿಗೆ ಒದಗಿಸುವ ಮನಸ್ಸು ವ್ಯಾಪಾರಿಗಳಲ್ಲಿದ್ದರೆ ವ್ಯವಸ್ಥೆಗಳು ಸಮರ್ಪಕವಾಗಿ ಸಮತೋಲನದಲ್ಲಿ ಮುನ್ನಡೆಯಲು ಸಾಧ್ಯವಿದೆ. ಆದರೆ ರೈತರಿಂದ ಅಗ್ಗದ ದರದಲ್ಲಿ ವಸ್ತುಗಳನ್ನು ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಅಸಮರ್ಪಕ ವಿಧಾನದಲ್ಲಿ ಲಾಭಗಳಿಸುವ ಸ್ವಾರ್ಥ ಚಿಂತನೆಗಳಿಂದ ಖರೀದಿಸುವ ಗ್ರಾಹಕರಿಗೆ ಹೊರೆಯಾಗಿ ಹಣ್ಣು-ತರಕಾರಿಗಳು ಮಾರುಕಟ್ಟೆಯಲ್ಲೇ ವ್ಯರ್ಥವಾಗುತ್ತಿರುವುದು ವಸ್ತುಸ್ಥಿತಿಯಾಗಿದ್ದು, ಈ ಬಗ್ಗೆ ಸರ್ಕಾರವಾಗಲಿ, ತಜ್ಞರಾಗಲಿ ಮೌನವಾಗಿರುವುದು ವ್ಯಾಪಕ ಸಮಸ್ಯೆಗೆ ಕಾರಣವಾಗುತ್ತಿದೆ.
ದಾಸ್ತಾನು ಅಸಾಧ್ಯ:
ಬೇಸಿಗೆಯ ಋತುವಿನಲ್ಲಿ ಬಹುಬೇಡಿಕೆಯ ಪಪ್ಪಾಯಕ್ಕೆ ಇದೀಗ ಬಂದೊದಗಿರುವ ಕೊರೊನಾ ಆತಂಕ ತೀವ್ರ ಹತಾಶೆಗೆ ಕಾರಣವಾಗುತ್ತಿದೆ. ಹಣ್ಣುಗಳನ್ನು ಇತರ ವಸ್ತುಗಳಂತೆ ದಾಸ್ತಾನಿರಿಸಿ ಮಾರುವ ಸ್ಥಿತಿಯಿಲ್ಲ. ಕಾಯಿಗಳು ಬಲಿತು ಹಣ್ಣುಗಳಾಗಿ ಒಂದೆರಡು ದಿನ ಮಾತ್ರ ಉಳಿದಿರಲು ಸಾಧ್ಯ. ಅಷ್ಟರಲ್ಲಿ ವ್ಯಾಪಾರವಾದರೆ ಕೃಷಿಕನಿಗೂ ವ್ಯಾಪಾರಿಗಳಿಗೂ ಆದಾಯ ಗಳಿಸಲು ಸಾಧ್ಯವಾಗುವುದು. ಆದರೆ ಸಂಚಾರ ನಿಬಂಧನೆಗಳಂತಹ ತುರ್ತು ಸಂದರ್ಭಗಳಲ್ಲಿ ರೈತ ಬೆಳೆಸಿದ ಹಣ್ಣುಗಳಂತಹ ಅಲ್ಪಾವಧಿ ಬೆಳೆಗಳನ್ನು ಏನು ಮಾಡುವುದೆಂಬ ಪರಿಹಾರೋಪಾಯಗಳ ಖಚಿತತೆ ಇಲ್ಲದೆ ಪಪ್ಪಾಯ ಸಹಿತ ಹಣ್ಣುಗಳ ವ್ಯಾಪಾರದ ಮೇಲೆ ಲಾಕ್‍ಡೌನ್ ಗಂಭೀರ ಪರಿಣಾಮ ಬೀರಿರುವುದು ಹೊಡೆತವಾಗಿ ಪರಿಣಮಿಸಿದೆ.
ಸರ್ಕಾರ-ಕೃಷಿ ಸಂಶೋಧನಾ ಕೇಂದ್ರಗಳ ಮೌನ:
ಲಾಕ್‍ಡೌನ್ ತುರ್ತು ಸಂದರ್ಭಗಳಲ್ಲಿ ಹಣ್ಣುಹಂಪಲುಗಳನ್ನು, ಕೃಷಿಕರನ್ನು ಸಂರಕ್ಷಿಸಲು ಸರ್ಕಾರ, ಕೃಷಿ ಸಂಶೋಧನಾ ಕೇಂದ್ರಗಳು ಮುಂದೆ ಬರಬೇಕು. ಉತ್ಪನ್ನಗಳನ್ನು ಸ್ವತಃ ಖರೀದಿಸಿ ಉಪ ಉತ್ಪನ್ನಗಳಾಗಿ ಸಂರಕ್ಷಿಸುವಲ್ಲಿ ಕೃಷಿ ಸಂಶೋಧನಾ ಕೇಂದ್ರಗಳು ಮುಂದಾದರೆ ಭಟ್ ಅವರಂತಹ ಅನೇಕ ಕೃಷಿಕರ ಬಾಳು ಹಸನಾದೀತು.




