ಮಂಜೇಶ್ವರ: ಕಾಸರಗೋಡಿನ ಖ್ಯಾತ ಹಿರಿಯ ತಾಂತ್ರಿಕ ಮನೆತನವಾದ ಪೊಳ್ಳಕಜೆ ಶ್ರೀವನದುರ್ಗಾ ಕ್ಷೇತ್ರದ ಬ್ರಹ್ಮಶ್ರೀ ಗೋವಿಂದ ಭಟ್ ಪೊಳ್ಳಕಜೆ(85) ಅಲ್ಪಕಾಲದ ಅಸೌಖ್ಯದ ಕಾರಣ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಜಿಲ್ಲೆಯ ತಾಂತ್ರಿಕ ವೈದಿಕ ಕ್ಷೇತ್ರದಲ್ಲಿ ತಮ್ಮದೇ ವಿಧಿವಿಧಾನ-ಆರಾಧನೆಗಳ ಮೂಲಕ ಗುರುತಿಸಿಕೊಂಡಿದ್ದರು. ಗೋವಿಂದ ಭಟ್ ಅವರ ಶಿಷ್ಯವರ್ಗ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಹಿತ ವಿವಿಧೆಡೆಗಳಲ್ಲಿ ವ್ಯಾಪಿಸಿದ್ದರು. ಮೃತರು ತಮ್ಮ ಆರಂಭಿಕ ವೈದಿಕ ಶಿಕ್ಷಣವನ್ನು ಬಡಾಜೆ ತಂತ್ರಿಗಳಿಂದಲೂ ಬಳಿಕ ಕೋಳ್ಯೂರು-ವಾರಣಾಸಿ ವೈದಿಕ ಮನೆತನದಲ್ಲಿ ತಾಂತ್ರಿಕ ವಿಧಿಗಳನ್ನೂ ಅಭ್ಯಸಿಸಿದ್ದರು. ವಾರ್ಷಿಕ ನವರಾತ್ರಿ ಪರ್ವಕಾಲದಲ್ಲಿ ಹತ್ತೂ ದಿನಗಳಲ್ಲೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾರಾಧನೆಗೂ ಮಹತ್ವ ನೀಡಿದ್ದರು. ವಿವಿಧ ಕ್ಷೇತ್ರಗಳ ಪ್ರತಿಷ್ಠೆ, ನವೀಕರಣಗಳ ನೇತೃತ್ವ ವಹಿಸಿ ಜನಮನ್ನಣೆ ಪಡೆದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಸಹೋದರರ ಸಹಿತ ಅಪಾರ ಬಂಧುಗಳನ್ನೂ ಶಿಷ್ಯವರ್ಗವನ್ನೂ ಅಗಲಿದ್ದಾರೆ.


