ಉಪ್ಪಳ: ಐಷಲ್ ಫೌಂಡೇಷನ್ ಸಂಸ್ಥೆ ಮಂಗಲ್ಪಾಡಿಯ (ಮಂಜೇಶ್ವರ)ತಾಲೂಕು ಆಸ್ಪತ್ರೆಗೆ 10 ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಿದೆ.
ಉಪ್ಪಳಗೇಟ್ ನಿವಾಸಿ ಅಬ್ದುಲ್ ಲತೀಫ್ ಅವರು ಅಧ್ಯಕ್ಷರಾಗಿರುವ ಈ ಸಂಸ್ಥೆ 75 ಲಕ್ಷ ರೂ. ವೆಚ್ಚದ ಯಂತ್ರಗಳನ್ನು ಹಸ್ತಾಂತರಿಸಿದೆ. ಈ ಮೂಲಕ ಜಿಲ್ಲೆಯ ಗಡಿಪ್ರದೇಶದ ಜನತೆಯ ಅನೇಕ ವರ್ಷಗಳಕನಸು ನನಸಾಗಿದೆ. ಈ ವರೆಗೆ ಡಯಾಲಿಸಿಸ್ ಚಿಕಿತ್ಸೆಗಾಗಿ ಇಲ್ಲಿನ ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿತ್ತು.
ಆಸ್ಪತ್ರೆಯಲ್ಲಿ ಈ ಸಂಬಂಧ ನಿನ್ನೆ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಮತ್ತು ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಯಂತ್ರಗಳನ್ನು ಪಡೆದುಕೊಂಡರು. ಐಷಲ್ ಫೌಂಡೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್, ನಿರ್ದೇಶಕರಾದ ಇಸ್ಮಾಯಿಲ್ ಫವಾಸ್, ದಿಲ್ ಷಾದ್ ಎಸ್.ಎ.ತಂಙಳ್, ಮಂಗಲ್ಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಷಾಹುಲ್ ಹಮೀದ್ ಬಂದ್ಯೋಡು, ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಚಂದ್ರಮೋಹನ್, ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಎಸ್.ಸುರೇಂದ್ರನ್, ಆಸ್ಪತ್ರೆ ನಿರ್ವಹಣಾ ಸಮಿತಿ ಸದಸ್ಯರಾದ ಪಿ.ಎನ್.ಸಲೀಂ, ಅತ್ಯನ್ ಸಿ. ಉಪ್ಪಳ, ಕೋಸ್ ಮಾಸ್ ಹಮೀದ್, ಮಹಮೂದ್ ಕೈಕಂಬ, ಝೆಡ್ ಎ.ಕಯ್ಯಾರ್, ರಾಜಕೀಯ, ಸಾಮಾಜಿಕ ವಲಯಗಳ ಗಣ್ಯರು ಉಪಸ್ಥಿತರಿದ್ದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ನ ವ್ಯಾಪ್ತಿಯಲ್ಲಿ ಮಂಗಲ್ಪಾಡಿ ತಾಲೂಕು ಹೆಡ್ ಕ್ವಾರ್ಟರ್ಸ್ ಆಸ್ಪತ್ರೆ ಚಟುವಟಿಕೆ ನಡೆಸುತ್ತಿದೆ. ಮಂಜೇಶ್ವರದ ಮಾಜಿ ಶಾಸಕ ದಿ.ಪಿ.ಬಿ.ಅಬ್ದುಲ್ ರಝಾಕ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಮಂಜೂರಾಗಿದ್ದ 50 ಲಕ್ಷ ರೂ. ನಿಂದ ಡಯಲಿಸಿಸ್ ವಿಭಾಗದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ವಿದ್ಯುತ್ ಮತ್ತು ಜಲ ಸಂಪರ್ಕವನ್ನು ಬ್ಲಾಕ್ ಪಂಚಾಯತ್ ಒದಗಿಸಿದೆ. ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಿರುವ ಆರ್.ಒ.ಪ್ಲಾಂಟ್ ಗೆ ಶಾಸಕ ಎಂ.ಸಿ.ಖಮರುದ್ದೀನ್ ಅವರ ನಿಧಿಯಿಂದ ಮೊಬಲಗು ಒದಗಿಸಲಾಗಿದೆ. ಈಗ ಹತ್ತು ಡಯಾಲಿಸಿಸ್ ಯಂತ್ರಗಳು ಲಭಿಸಿರುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ 2 ಶಿಫ್ಟ್ ಗಳ ಮೂಲಕ ಸುಆರು 20 ಡಯಾಲಿಸಿಸ್ ನಡೆಸಬಹುದು.
20 ದಿನಗಳಲ್ಲಿ ಸೌಲಭ್ಯಕ್ಕೆ ಚಾಲನೆ:
20 ದಿನಗಳ ಅವಧಿಯಲ್ಲಿ ಮಂಗಲ್ಪಾಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಆರಂಭಗೊಳ್ಳಲಿದೆ. ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಮಂಜೇಶ್ವರ, ಮಂಗಲ್ಪಾಡಿ, ಮೀಂಜ, ವರ್ಕಾಡಿ, ಪೈವಳಿಕೆ, ಎಣ್ಮಕಜೆ, ಪುತ್ತಿಗೆ ಎಂಬ 7 ಗ್ರಾಮಪಂಚಾಯತ್ ಗಳ ರೋಗಿಗಳಿಗೆ ಈ ಉಚಿತ ಸೌಲಭ್ಯ ಅನುಗ್ರಹವಾಗಲಿದೆ.
* ಎ.ಕೆ.ಎಂ.ಅಶ್ರಫ್, ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂಚಾಯತ್.


