ಕಾಸರಗೋಡು: ಜಿಲ್ಲೆಯಿಂದ ಉತ್ತರಪ್ರದೇಶಕ್ಕಿರುವ ಮೊದಲ ರೈಲು ಶುಕ್ರವಾರ ಕಾಞಂಗಾಡ್ ರೈಲು ನಿಲ್ದಾಣದಿಂದ ಹೊರಟಿದೆ. ಈ ಅವಧಿಯಲ್ಲಿ ಊರಿಗೆ ತೆರಳುವ ಉದ್ದೇಶ ಹೊಂದಿರುವ ಇತರ ರಾಜ್ಯಗಳ ಕಾರ್ಮಿರನ್ನು ಕಳುಹುವ ಉದ್ದೇಶದಿಂದ ಈ ಸೌಲಭ್ಯ ಏರ್ಪಡಿಸಲಾಗಿದೆ.
1462 ಮಂದಿ ಇತರ ರಾಜ್ಯಗಳ ಕಾರ್ಮಿಕರು ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯಿಂದ ಹೊರಟಿದ್ದಾರೆ. ಉತ್ತರ ಪ್ರದೇಶ ಮೂಲದ ಕಾರ್ಮಿಕರು ಈ ಬಗ್ಗೆ ಆಸಕ್ತಿ ಪ್ರಕಟಿಸಿದ್ದರು. ಮಹಿಳೆಯರಿಗೆ, ಮಕ್ಕಳಿಗೆ ಆದ್ಯತೆ ನೀಡಿ ಮೊದಲ ಪಟ್ಟಿ ಸಿದ್ಧಪಡಿಸಲಾಗಿತ್ತು. ಜಿಲ್ಲೆಯ 11 ಗ್ರಾಮಪಂಚಾಯತ್ ಗಳಿಂದ, ಕಾಸರಗೋಡು, ಕಾಞಂಗಾಡ್ ನಗರಸಭೆಗಳಿಂದ ಮೊದಲ ಹಂತದಲ್ಲಿ ಹೊರಟಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ 1462 ಮಂದಿಯ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿ ನಾನ್ ಕೋವಿಡ್ ಸರ್ಟಿಫಿಕೆಟ್ ವಿತರಣೆ ನಡೆಸಲಾಗಿದೆ.
ಶುಕ್ರವಾರ ರಾತ್ರಿ 9.30 ಕ್ಕೆ ಕಾಞಂಗಾಡ್ ರೈಲುನಿಲ್ದಾಣದಿಂದ ರೈಲು ಹೊಟಿದ್ದು, ಲಕ್ನೋ ಗೆ ತಲಪಲಿದೆ. ಸಿದ್ಧಪಡಿಸಲಾದ ಪಟ್ಟಿಯಲ್ಲಿ 1468 ಮಂದಿ ಇದ್ದು, ರೈಲು ಹೊರಡುವ ವೇಳೆ 1462 ಮಂದಿ ಪ್ರಯಾಣಿಕರಿದ್ದರು. ಸಂಜೆ 4.30ರ ವೇಳೆ ರೈಲುನಿಲ್ದಾಣಕ್ಕೆ ಬಂದುಸೇರಿದ ಪ್ರಯಾಣಿಕರಿಗೆ ರಾಜ್ಯಸರಕಾರ ಸೂಚಿಸಿದ್ದ ರೀತಿಯ ಆಹಾರದ ಪೆÇಟ್ಟಣ ನೀಡಿ, ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ನಡೆಸುವ ಮಾಹಿತಿ ನೀಡಲಾಗಿತ್ತು.
ಪಂಚಾಯತ್ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಕೆ.ರೆಜಿಕುಮಾರ್ ರೈಲು ಪ್ರಯಾಣಕ್ಕೆ ಹಸುರು ನಿಶಾನೆ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ರೈಲುನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರಿಗೆ ವಿದಾಯಕೋರಿದರು.


