ಇಂದಿನ ಮೂರು ಟಿಪ್ಪಣಿಗಳು
೧. ಪೇದೆ ಹೋಗಿ ಕಾನ್ಸ್‌ಟೇಬಲ್ ಬಂದ ಢುಂ ಢುಂ ಢುಂ!
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇನ್ನುಮುಂದೆ ಪೊಲೀಸ್ ಪೇದೆ ಎಂಬ ಪದ ಬಳಕೆ ಮಾಡದೆ, ಕಾನ್ಸ್‌ಟೇಬಲ್ ಪದ ಬಳಸಬೇಕು ಎಂದು ಕರ್ನಾಟಕ ಪೊಲೀಸ್ ಇಲಾಖೆ ಆದೇಶ ನೀಡಿದೆ. ಪೇದೆ, ಮುಖ್ಯ ಪೇದೆ, ಎಂದೆಲ್ಲ ಕರೆಯುವುದು ಅಷ್ಟೊಂದು ಸಮಂಜಸವಲ್ಲ ಆದ್ದರಿಂದ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಎಂದು ಕರೆಯಬೇಕು. ಬರವಣಿಗೆಯಲ್ಲೂ ಇದೇ ರೀತಿ ಪದಬಳಕೆ ಮಾಡಬೇಕು ಎನ್ನುವುದು ಈ ಆದೇಶದ ಸಾರಾಂಶ. 2009ರಲ್ಲೇ ಒಮ್ಮೆ ಈ ಆದೇಶ ಬಂದಿದ್ದರೂ ಯಾರೂ ಪಾಲಿಸಲಿಲ್ಲ ಎನ್ನುವುದು ವಿಶೇಷ.
ಪೇದೆ ಪದಕ್ಕೆ ಕಿಟ್ಟೆಲ್ ಕೋಶದಲ್ಲಿ ಏನು ಅರ್ಥ ಕೊಟ್ಟಿದ್ದಾರೆಂದು ನೋಡಿದರೆ ಅಲ್ಲಿ ಪೇದೆ = A foot soldier, a peon, a pawn at chess ಎಂದು ಮೂರು ಅರ್ಥಗಳನ್ನು ಕೊಟ್ಟಿದ್ದಾರೆ.
ಸಂಸ್ಕೃತದ ‘ಪದಾತಿನ್’ ಶಬ್ದದಿಂದ, ಕಾಲು ನಡಿಗೆಯವನು, ಕಾಲಾಳು, ಕಾಲುನಡೆಯ ಸೈನಿಕ ಎಂಬ ಅರ್ಥದಲ್ಲಿ ಬಂದಿರುವ ಪದ ‘ಪೇದೆ’. ಪದ ಅಥವಾ ಪಾದ ಶಬ್ದಗಳಿಗೆ ಕಾಲು/ಹೆಜ್ಜೆ/ನಡಿಗೆ ಅರ್ಥಗಳಿದ್ದು ‘ಪೇದೆ’ ಅದೇ ಅರ್ಥವಿಸ್ತಾರದ್ದು. ಮರಾಠಿಯಲ್ಲಿ ‘ಪ್ಯಾದಾ’. ಈಗ ಪೊಲೀಸರು ಕಾಲಾಳು (ಕಾಲ್ನಡಿಗೆಯಿಂದಲೇ ಕಾರ್ಯವೆಸಗುವವರು) ಅಲ್ಲವಾದರೆ ‘ಪೇದೆ’ ಎಂದು ಬಳಸುವುದು ಅಸಮಂಜಸವೇ. ಅದರ ಹೊರತಾಗಿ ಯಾವುದೇ ಅವಹೇಳನ, ಕೀಳರಿಮೆ ಇತ್ಯಾದಿ ‘ಪೇದೆ’ಗೆ ಅಂಟಿಕೊಳ್ಳಬೇಕಿಲ್ಲ. ಚೆಸ್ ಆಟದಲ್ಲಿ ಪೇದೆ (pawn) ಕೂಡ ರಾಜನಿಗೆ ಚೆಕ್‌ಮೇಟ್ ಕೊಡಬಹುದು. ಅಷ್ಟು ಶಕ್ತಿ ಪೇದೆಗೆ ಇದೆ!
‘ಪೇದೆ’ ಎನ್ನುವುದಕ್ಕೆ ಕನ್ನಡದಲ್ಲಿ ಅಥವಾ ಬೇರೆ ಯಾವುದೇ ಭಾರತೀಯ ಭಾಷಾಮೂಲದಲ್ಲಿ ಪದ ಸಿಗದೆ ಇಂಗ್ಲಿಷ್‌ನ ‘ಕಾನ್ಸ್‌ಟೇಬಲ್’ಗೇ ಮೊರೆಹೊಕ್ಕಂತಾಯ್ತಲ್ಲ ಎನ್ನುವುದು ತುಸು ಬೇಸರದ ವಿಚಾರವೇ.
===
೨. ಕನ್ನಡ ‘ಮಾಧ್ಯಮ’ಗಳಿಂದ ಕಲಿಕೆ
ಕನ್ನಡ ಪತ್ರಿಕೆಗಳು ತಿದ್ದಿಕೊಳ್ಳುತ್ತವೆಂಬ ಆಶಯದಿಂದ ಈ ತಪ್ಪುಗಳನ್ನು ಇಲ್ಲಿ ವ್ಯಾಖ್ಯಾನಿಸುತ್ತಿರುವುದಲ್ಲ. ಭಾಷೆಯ ಬಗೆಗಿನ ಬೇಜವಾಬ್ದಾರಿ ಈ ಪತ್ರಿಕೆಗಳಿಗೆ ಒಂದು ‘ರೋಗ’ದಂತಾಗಿದ್ದು ಅದು ವಾಸಿಯಾಗದ ಹಂತ ತಲುಪಿದೆ. ಹೆಚ್ಚೆಂದರೆ ‘ಭಾಷೆ ಇಲ್ಲದವು’ ಎಂದು ಅವುಗಳನ್ನು ಜರಿಯಬಹುದು ಅಷ್ಟೇ. ಆದರೆ ಚಾಣಕ್ಯ ಹೇಳಿರುವಂತೆ ‘ಇನ್ನೊಬ್ಬರ ತಪ್ಪಿನಿಂದ ನಾವು ಕಲಿಯಬಹುದು’ ಎನ್ನುವುದು ಮುಖ್ಯ. ಪತ್ರಿಕೆಗಳು ಮಾಡುತ್ತಿರುವ ಈ ತಪ್ಪುಗಳು ನಮ್ಮ ಬರವಣಿಗೆಯಲ್ಲಿ ನುಸುಳದಂತೆ ನಾವು ಎಚ್ಚರದಿಂದಿರಬಹುದು. ಸ್ವಚ್ಛ ಭಾಷೆ ಅಭಿಯಾನದ ಮೂಲ ಉದ್ದೇಶ ಅದೇ.
ಅ) “ನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆ" [ಕನ್ನಡವನ್‌ಇಂಡಿಯಾ. ೨೧ಮೇ೨೦೨೦. ಗಮನಿಸಿ ಕಳುಹಿಸಿದವರು: ಶ್ರೀಹರ್ಷ ಸುಬ್ಬಕೃಷ್ಣ]. ಮೊನ್ನೆ ಮೇ ೨೧ರಂದು ರಾಜೀವ್ ಗಾಂಧಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಹೇಳಿಕೆಯನ್ನು ಕನ್ನಡದಲ್ಲಿ ಹೀಗೆ ಅನುವಾದ ಮಾಡಿ ಪ್ರಕಟಿಸಿದೆ ಈ ನ್ಯೂಸ್‌ಪೋರ್ಟಲ್. ಅಷ್ಟು ಸಾಲದೆಂಬಂತೆ ಅಲ್ಲೇ ಮೇಲೆ "ರಾಜೀವ್ ಹತ್ಯೆ ಕುರಿತಂತೆ ಬೆಚ್ಚಿಬೀಳಿಸುವ ಸತ್ಯ ಸಂಗತಿ!" ಎಂಬ ಇನ್ನೊಂದು ತಲೆಬರಹ. ಇದೇನಾ ಆ ಬೆಚ್ಚಿಬೀಳಿಸುವ ಸಂಗತಿ? ರಾಜೀವ್ ಗಾಂಧಿ ಎಷ್ಟು ಜನರನ್ನು ಕೊಂದಿದ್ದಾರೆ? ಒಂದುವೇಳೆ ಅದೆಷ್ಟೋ ಜನರನ್ನು ಕೊಂದಿದ್ದಾರೆ ಅಂತಿಟ್ಟುಕೊಂಡರೂ, ಕೊಲ್ಲಲ್ಪಟ್ಟವರನ್ನು ರಾಹುಲ್ ಮತ್ತು ಪಿಯಾಂಕಾ ಕ್ಷಮಿಸುವುದು ಏಕೆ ಮತ್ತು ಹೇಗೆ?
ಆ) “ಕುರಿಗಾಹಿ ತಿಂದ ಹುಲಿ ಬೋನಿಗೆ" [ವಿಜಯವಾಣಿ. ೨೭ಮೇ೨೦೨೦. ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಅನಂತ ತಾಮ್ಹನಕರ್]. ಕುರಿಗಾಹಿ ಅಂದರೆ ಕುರಿಗಳನ್ನು ಕಾಯುವವನು, ಕುರುಬ. ಆತ ಹುಲಿಯನ್ನು ತಿಂದನಂತೆ! ಅಬ್ಬಬ್ಬಾ! ಆಯ್ತಪ್ಪಾ ಏನೋ ಪರಾಕ್ರಮಿ, ಆಧುನಿಕ ಹೊಯ್ಸಳ, ಸಿಟ್ಟಿನಿಂದ ಹುಲಿಯನ್ನು ಕೊಂದನು, ಕೊಂದ ಪಾಪ ತಿಂದು ಪರಿಹಾರ ಎಂಬಂತೆ ತಿಂದನು ಅಂತಲೇ ಇಟ್ಕೊಳ್ಳೋಣ. ಆತ ತಿಂದು ಜೀರ್ಣಿಸಿದ ಹುಲಿಯನ್ನು ಆಮೇಲೆ ಬೋನಿಗೆ ಹಾಕುವುದಾದರೂ ಹೇಗೆ? ವಿಜಯವಾಣಿಯ ಪತ್ರಕರ್ತ ಈ ಪೂರ್ಣ ಪ್ರಕ್ರಿಯೆಯನ್ನು, ಅಂದರೆ ಹುಲಿಯನ್ನು ತಾನೇ ತಿಂದು ಆಮೇಲೆ ಅದನ್ನು ಬೋನಿಗೆ ಹಾಕುವುದನ್ನು, ತೋರಿಸಲು ಓದುಗರಿಗೆ ಪ್ರಾತ್ಯಕ್ಷಿಕೆಯೊಂದನ್ನು ಏರ್ಪಡಿಸಿದರೆ ಈ ಎಲ್ಲ ಸಂಶಯಗಳ ನಿವಾರಣೆ ಆಗಬಹುದು.
ಇ) “ಸುರತ್ಕಲ್: ನಿರ್ಲಕ್ಷಿತ ಜನತೆಗೆ ಕಾನೂನಿನ ಚಾಟಿಯೇಟು!" [ಉದಯವಾಣಿ. ೨೫ಮಾರ್ಚ್೨೦೨೦. ಗಮನಿಸಿ ಕಳುಹಿಸಿದವರು: ನಾರ್ತ್ ಕೆರೊಲಿನಾ(ಅಮೆರಿಕ)ದಿಂದ ರವಿಶಂಕರ್] ಲಾಕ್‌ಡೌನ್ ಸೂಚನೆ ಮೀರಿ ಅನಗತ್ಯವಾಗಿ ಬೀದಿ ಸುತ್ತುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆಂಬ ಸುದ್ದಿಯ ತಲೆಬರಹವಿದು. ಮೊದಲನೆಯದಾಗಿ ನಿರ್ಲಕ್ಷಿತ ಎಂಬ ಪದವೇ ತಪ್ಪು, ಅದು ಅಲಕ್ಷಿತ ಎಂದಾಗಬೇಕು. ಆದರೆ ಇಲ್ಲಿ ಜನತೆ ಅಲಕ್ಷ್ಯಕ್ಕೊಳಗಾದದ್ದಲ್ಲ, ಜನತೆಯೇ ಕಾನೂನನ್ನು ಅಲಕ್ಷಿಸಿದ್ದು. ಅಥವಾ, ಗೊತ್ತಿದ್ದೂ ಗೊತ್ತಿಲ್ಲದವರಂತೆ ನಡೆದುಕೊಂಡದ್ದು!
ಈ) “ಕರೋನಾ ಔಷಧ ಅಕ್ರಮ ವರದಿ ನೀಡುವಂತೆ ಸಚಿವಾಲಯ ಸೂಚನೆ" [ವಿಶ್ವವಾಣಿ. ೨೪ಮೇ೨೦೨೦. ಗಮನಿಸಿ ಕಳುಹಿಸಿದವರು: ಪ್ರೇಮಚಂದ್ರ ಕೆ.ಆರ್] ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯಲ್ಲಿ ಪಿಪಿಇ ಕಿಟ್, ಸ್ಯಾನಿಟೈಸರ್, ಟೆಸ್ಟ್ ಕಿಟ್, ವೆಂಟಿಲೇಟರ್, ಡಯಾಲಿಸಿಸ್ ಉಪಕರಣಗಳು ಮತ್ತು ಔಷಧದ ಖರೀದಿಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳನ್ನು ಕುರಿತ ಸುದ್ದಿಯ ಶೀರ್ಷಿಕೆ. ಖರೀದಿಯೂ ಅಕ್ರಮ, ಅದರ ಬಗೆಗಿನ ವರದಿಯೂ ಅಕ್ರಮ! ಹಾಗೆ ಅಕ್ರಮ ವರದಿಯನ್ನಿಟ್ಟುಕೊಂಡು ಸಚಿವಾಲಯ ಏನು ಮಾಡುತ್ತದೆ? ಈ ತಲೆಬರಹದಲ್ಲಿ ‘ಅಕ್ರಮ’ ಪದದ ಬಳಿಕ ಒಂದು ಅರ್ಧವಿರಾಮ ಚಿಹ್ನೆ (colon : ) ಸೇರಿಸಿದ್ದರೆ ಇಷ್ಟೆಲ್ಲ ಆಭಾಸವಾಗುತ್ತಿರಲಿಲ್ಲ. ಇದೇ ಸುದ್ದಿಯ ವಿವರದಲ್ಲಿ ‘ಡೆಲಿವರ್ ಚಲನ್’ ಎನ್ನಲು ‘ಡೆಲಿವರಿ ಚಾನೆಲ್’ ಎಂದು ಬರೆದಿರುವುದು ಸುದ್ದಿ ಪ್ರಕಟಣೆಯಲ್ಲೂ ಅಕ್ರಮ ಎಂದು ಭಾವಿಸುವಂತಾಗಿದೆ.
ಉ) “ಮೂಡುಬಿದಿರೆ: ಗಂಡನಿಗೆ ಮಗುವಿನ ರೂಪದಲ್ಲಿ ಜನ್ಮ ನೀಡಿದ ಮಹಾತಾಯಿ- ಶಾಸಕ ಉಮಾನಾಥ್" [ದೈಜಿವರ್ಲ್ಡ್. ೨೧ಮೇ೨೦೨೦. ಗಮನಿಸಿ ಕಳುಹಿಸಿದವರು: ಬೆಂಗಳೂರಿನಿಂದ ರತ್ನಾ ಭಟ್] ಈ ಶೀರ್ಷಿಕೆಯನ್ನು ಓದಿ ಸರಿಯಾಗಿ ಅರ್ಥಮಾಡಿಕೊಂಡವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಬಹುದು. ಶೀರ್ಷಿಕೆಯನ್ನು ಬರೆದವರಿಗಂತೂ ನೊಬೆಲ್ ಪಾರಿತೋಷಕ ಕೊಡುವುದೇ ಒಳ್ಳೆಯದು. ಸುದ್ದಿಯ ಸಂಕ್ಷಿಪ್ತ ವಿವರ ಏನು ಗೊತ್ತೇ? ಗಂಡ ಮುಂಬಯಿಯಲ್ಲಿ ಕೊರೊನಾಗೆ ಬಲಿಯಾದರು. ಅದೇ ದಿನ ಮೂಡಬಿದಿರೆಯಲ್ಲಿ ತವರುಮನೆಯಲ್ಲಿ ಹೆಂಡತಿ ಮಗುವನ್ನು ಹೆತ್ತರು. ಸುದ್ದಿ ವಿವರದ ಮೊದಲ ವಾಕ್ಯದಲ್ಲಿಯೂ ಇನ್ನಷ್ಟು ತಪ್ಪುಗಳು: “ಮೂಡುಬಿದಿರೆ, ಮೇ ೨೧: ಇಲ್ಲಿನ ನಿವಾಸಿಯೊಬ್ಬರು ಮುಂಬೈನಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಅದೇ ದಿನ ಮಗುವಿಗೆ ಜನ ನೀಡಿದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಶೋಕತಪ್ತ ಕುಟುಂಬಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಸಾಂತ್ವಾನ ಹೇಳಿದ್ದಾರೆ." - ಇದರಲ್ಲಿ “ಮಗುವಿಗೆ ಜನ ನೀಡಿದ" ಎಂದರೇನು? ಅದು "ಮಗುವಿಗೆ ಜನ್ಮ ನೀಡಿದ" ಅಂತ ತಿದ್ದಿಕೊಂಡು ಓದಿದರೂ, ಮಗುವಿಗೆ ಜನ್ಮ ನೀಡುವುದು ಹೃದಯ ವಿದ್ರಾವಕ ಘಟನೆಯೇ? ಕೊನೆಯಲ್ಲಿ ‘ಸಾಂತ್ವಾನ’ ಎಂದರೇನು? ಅದು ಸಾಂತ್ವನ ಎಂದಾಗಬೇಕು.
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಸ್ಪಂದನ ಸರಿ. ಮಿಡಿಯುವುದು, ಸ್ವಲ್ಪ ಕಂಪಿಸುವುದು ಎಂಬ ಅರ್ಥಗಳು. ಅಕಾರಾಂತ ನಪುಂಸಕ ಲಿಂಗ ಪದ. ಸಂಸ್ಕೃತದ ಆ-ಕಾರಾಂತ ಸ್ತ್ರೀಲಿಂಗ ಪದಗಳನ್ನು ಕನ್ನಡದಲ್ಲಿ ಎ-ಕಾರಾಂತವಾಗಿ ಬಳಸುವುದು ರೂಢಿಯಲ್ಲಿದೆ (ಭಾವನಾ->ಭಾವನೆ; ಆಶಾ-ಆಶೆ; ಪ್ರತಿಭಾ->ಪ್ರತಿಭೆ ಇತ್ಯಾದಿ). ಆದರೆ ‘ಸ್ಪಂದನ’ವನ್ನು ‘ಸ್ಪಂದನೆ’ ಎಂದು ಬರೆಯುವುದು ಸರಿಯಲ್ಲ.
ಆ) ಉದುಂಬರ ಸರಿ. ಅತ್ತಿ ಮರಕ್ಕೆ ಸಂಸ್ಕೃತದಲ್ಲಿ ಉದುಂಬರ ಎನ್ನುತ್ತಾರೆ. ಅತ್ತಿ ಮರದ ತುಂಡು (ಸಮಿಧೆ), ರೆಂಬೆ, ಎಲೆ, ಹಣ್ಣು... ಎನ್ನಲಿಕ್ಕೆ ಔದುಂಬರ ಎನ್ನಬೇಕೇ ವಿನಾ ವೃಕ್ಷವನ್ನೇ ಔದುಂಬರ ಎನ್ನುವುದಲ್ಲ.
ಇ) ಗ್ರಾಸ ಸರಿ. ತುತ್ತು, ನುಂಗುವುದು ಎಂಬ ಅರ್ಥ. ಗ್ರಹಣ ಕಾಲದಲ್ಲಿ ಸೂರ್ಯ ಅಥವಾ ಚಂದ್ರ ಬಿಂಬಗಳು ಭಾಗಶಃ ಅಥವಾ ಪೂರ್ಣವಾಗಿ ಮುಚ್ಚಿಹೋಗುವುದಕ್ಕೂ ಗ್ರಾಸ ಎನ್ನುತ್ತಾರೆ. ಇದನ್ನು ಘ್ರಾಸ ಎಂದು ಬರೆಯುವುದು ತಪ್ಪು.
ಈ) ಉದ್ಯಾಪನ ಸರಿ. ಯಾವುದಾದರೊಂದು ವ್ರತವನ್ನು ನಿರ್ದಿಷ್ಟ ಕಾಲದವರೆಗೆ ಆಚರಿಸಿ ಕೊನೆಯಲ್ಲಿ ಅದನ್ನು ಶಾಸ್ತ್ರೋಕ್ತವಾಗಿ ಮುಗಿಸುವುದು. ಉಧ್ಯಾಪನ ತಪ್ಪು.




