ಮಂಜೇಶ್ವರ: ಇತರ ರಾಜ್ಯಗಳಿಂದ ಕೇರಳ ರಾಜ್ಯ ಪ್ರವೇಶ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಿಂದ ಈ ವರೆಗೆ ಶೇ 79.45 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಶನಿವಾರ ಸಂಜೆ ವರೆಗೆ 7617 ಅರ್ಜಿಗಳು ಕಭಿಸಿದ್ದು, 6052 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಈ ಮೂಲಕ ಒಟ್ಟು ಅರ್ಜಿದಾರರಲ್ಲಿ ಶೇ 79.45 ಮಂದಿಗೆ ಪಾಸ್ ಮಂಜೂರಾಗಿದೆ ಎಂದವರು ಹೇಳಿದರು.
ಅರ್ಜಿದಾರರಿಗೆ ಕ್ವಾರೆಂಟೈನ್ ಕೇಂದ್ರಗಳ ಲಭ್ಯತೆಗನುಗುಣವಾಗಿ ಪಾಸ್ ವಿತರಣೆ ನಡೆಸಲಾಗುತ್ತಿದೆ. ಒಬ್ಬರು ಅರ್ಜಿ ಸಲ್ಲಿಸಿದ ತಕ್ಷಣವೇ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು ಅರ್ಜಿದಾರರ ಮನೆಯಲ್ಲಿ ಯಾ ಸರಕಾರಿ ಕ್ವಾರೆಂಟೈನ್ ಕೇಂದ್ರದಲ್ಲಿ ಸೌಲಭ್ಯವಿದೆಯೇ ಎಂಬ ಬಗ್ಗೆ ಖಚಿತಪಡಿಸಿ, ದಾಖಲು ಪಡಿಸಿ ಉಪಜಿಲ್ಲಾಧಿಕಾರಿ ಯಾ ಹೆಚ್ಚುವರಿ ದಂಡನಾಧಿಕಾರಿಗೆ ವರದಿ ಸಲ್ಲಿಸುವರು. ಈ ವರದಿಯ ಹಿನ್ನೆಲೆಯಲ್ಲಿ ಪಾಸ್ ಮಂಜೂರು ಮಾಡಲಾಗುವುದು. ಮಿತಿಗಳಿದ್ದೂ, ಗರಿಷ್ಠ ಮಟ್ಟದಲ್ಲಿ ಪಾಸ್ ಮಂಜೂರು ಮಾಡುವಲ್ಲಿ ಕಾಸರಗೋಡು ಜಿಲ್ಲೆ 6 ನೇ ಸ್ಥಾನ ಹೊಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.


