ಕುಂಬಳೆ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯಾದ್ಯಂತ ಭಾನುವಾರ ಮಧ್ಯ ರಾತ್ರಿಯಿಂದ ಭಾರೀ ಮಳೆಯಾಗಿದೆ.
ಮಧ್ಯರಾತ್ರಿಯಿಂದಲೇ ಸಿಡಿಲು, ಮಿಂಚು ಸಹಿತ ಬಿರುಸಿನ ಮಳೆ ಜಿಲ್ಲೆಯಾದ್ಯಂತ ಸುರಿಯಿತು. ಮಳೆಯಿಂದ ಅಡಕೆ ಒಣಗಿಸಲು ಅಡ್ಡಿಯಾಯಿತು. ನಿರಂತರ ಮಳೆಯಿಂದಾಗಿ ತೋಡುಗಳಲ್ಲಿ ಮಳೆ ನೀರು ಹರಿಯುತ್ತಿದೆ. ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಆಯೋಮಯವಾಗಿದೆ. ಕಾಮಗಾರಿಯಾಗಿ ಅಗೆದ ಹೊಂಡಗಳಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನಿಸುವಂತಾಗಿದೆ. ಮಳೆಗಾಲ ಪೂರ್ವ ಶುಚೀಕರಣ ನಡೆಯದಿರುವುದರಿಂದ ರಸ್ತೆ ಬದಿ ಚರಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಉಪ್ಪಳ ಬಸ್ ನಿಲ್ದಾಣ ಸಹಿತ ರಾ.ಹೆದ್ದಾರಿ ಬದಿಯಲ್ಲಿ ನೀರು ತುಂಬಿಕೊಂಡಿದೆ. ಮಂಗಲ್ಪಾಡಿ ಪಂಚಾಯತಿಯ ಪ್ರತಾಪನಗರ ಒಳ ರಸ್ತೆಯಲ್ಲಿ ಚರಂಡಿಯ ಅವ್ಯವಸ್ಥೆಯಿಂದಾಗಿ ಮಣ್ಣಿನ ರಸ್ತೆ ಕೆಸರು ಮಯವಾಗಿದೆ. ಇದರಿಂದ ಇಲ್ಲಿನ ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ನೀರು ಹರಿಯತೊಡಗಿದೆ.

