ಕಾಸರಗೋಡು: ಮಾಂಸದ ಕೋಳಿಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ಅರ್ಥದಲ್ಲಿ ಸುಳ್ಳು ಮಾಹಿತಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮಾಂಸದ ಕೋಳಿಯ ಬೆಲೆ ನಿಗದಿ ಪಡಿಸಲಾಗಿದ್ದು, ಅದಕ್ಕಿಂತ ಅಧಿಕ ಬೆಲೆ ವಸೂಲಿ ಮಾಡಿದರೆ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಯೊಂದನ್ನೂ ಈ ವರದಿಯಲ್ಲಿ ಪ್ರಕಟಿಸಲಾಗಿದೆ. ಆದರೆ ಇಂಥಾ ಯಾವುದೇ ಪ್ರಕಟಣೆಯನ್ನು ಜಿಲ್ಲಾಡಳಿತ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದಕ್ಕೆ ಇಂತಹ ತಪ್ಪು ಮಾಹಿತಿ ಪ್ರಕಟಿಸಿದರೆ ಪೆÇಲೀಸ್ ಸೈಬರ್ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡಿದ್ದಾರೆ. ಜಿಲ್ಲಾಡಳಿತದ ಆದೇಶ ಪ್ರಕಾರ ಜಿಲ್ಲಾ ವಾರ್ತಾ ಇಲಾಖೆ ಮುಖಾಂತರ ನೀಡಲಾಗುವ ಸುದ್ದಿಗಳಲ್ಲದೆ ಬೇರಾವುದನ್ನೂ ಪರಿಗಣಿಸುವಂತಿಲ್ಲ. ಮಾಂಸದ ಕೋಳಿಗಳ ಬೆಲೆ ಹೆಚ್ಚಳ ನಿಯತ್ರಣದ ಹೊಣೆಯನ್ನು ಜಿಲ್ಲಾ ಸಪ್ಲೈ ಅಧಿಕಾರಿ ಮತ್ತು ಲೀಲಗಲ್ ಮೆಟ್ರಾಲಜಿ ಇಲಾಖೆ ಸಿಬ್ಬಂದಿಗೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸುದ್ದಿ ಪ್ರಕಟಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.


