ಮಂಜೇಶ್ವರ: ಮೀಯಪದವು ಸಮೀಪದ ಬೆಜ್ಜ ಪರಿಸರದಲ್ಲಿ ಕಳ್ಳಕಾರರು ಹಾಗೂ ಪುಂಡರ ಅಟ್ಟಹಾಸ ಮಿತಿಮೀರುತ್ತಿದ್ದು, ಲಾಕ್ ಡೌನ್ ಬಿಡುವನ್ನು ಸದುಪಯೋಗಪಡಿಸಿದ ಕಳ್ಳರು ಲಾಕ್ ಬ್ರೇಕ್ ನಡೆಸಿದ ಪ್ರಕರಣ ವರದಿಯಾಗಿದೆ.
ಬೆಜ್ಜದಲ್ಲಿ ಬುಧವಾರ ರಾತ್ರಿ ಎರಡು ದೈವಸ್ಥಾನಗಳಲ್ಲಿ ಕಳವು ಹಾಗೂ ಮನೆ ಮತ್ತು ಬಸ್ ತಂಗುದಾಣವನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಹೊಸಕಟ್ಟೆ ಬೆಜ್ಜದ ರಕ್ತೇಶ್ವರಿ ದೈವಸ್ಥಾನದ ಗರ್ಭಗುಡಿಯ ಬೀಗಮುರಿದು ಒಳನುಗ್ಗಿದ ಕಳ್ಳರು ಬೆಳ್ಳಿಯ ಆಯುಧ, ಬೆಳ್ಳಿಯ ಮಾಲೆ, ಮೊಗ ಸಹಿತ ಭಂಡಾರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಗರ್ಭಗುಡಿಯ ಸಮೀಪದ ಇನ್ನೊಂದು ಬಾಗಿಲನ್ನೂ ಮುರಿದು ಒಳಪ್ರವೇಶಿಸಿದ್ದಾರೆ. ಹೊರಾವರಣದ ಕಾಣಿಕೆ ಡಬ್ಬಿಯನ್ನೂ ಮುರಿದು ನಗದುಉ ದೋಚಲಾಗಿರುವುದು ಕಂಡುಬಂದಿದೆ.
ಗುರುವಾರ ಬೆಳಿಗ್ಗೆ ದೈವಸ್ಥಾನದಲ್ಲಿ ಕೈಮುಗಿಯಲು ಬಂದ ಮೀಯಪದವು ಶಿವಾಜಿನಗರದ ಅಂಬರೀಶ್ ಅವರಿಗೆ ಕಳವು ಪ್ರಕರಣ ಮೊದಲು ಗಮನಕ್ಕೆ ಬಂತು. ಅವರು ತಕ್ಷಣ ದೈವಸ್ಥಾನದ ಆಡಳಿತ ಸಮಿತಿಯ ಗಮನಕ್ಕೆ ತಂದಿದ್ದು, ಸುಮಾರು ಒಂದೂವರೆ ಲಕ್ಷ ರೂ.ಗಳ ಸೊತ್ತುಗಳು ಕಳವಾಗಿರುವ ಬಗ್ಗೆ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಂಜಿತ್ ಮಂಜೇಶ್ವರ ಪೋಲೀಸರಿಗೆ ನೀಡಿದ ದೂರಲ್ಲಿ ತಿಳಿಸಿದ್ದಾರೆ.
ಇದೇ ಪರಿಸರದ ಶ್ರೀಧೂಮಾವತಿ ಬಂಟ ದೈವದ ಕಾಣಿಕೆ ಹುಂಡಿಯನ್ನೂ ಕಳ್ಳರು ಮುರಿದು ಹಣ ದೋಚಿದ್ದಾರೆ.
ಇದರೊಂದಿಗೆ ಸಮೀಪ ಪ್ರದೇಶದ ಬೀದಿದೀಪ ಪುಡಿಗಟ್ಟಲಾಗಿದೆ. ಬೆಜ್ಜ ಕಾಲನಿಯ ಬಸ್ಸು ತಂಗುದಾಣ ನಾಶಪಡಿಸಲಾಗಿದೆ. ಮನೆಯೊಂದಕ್ಕೆ ಮುಂಜಾನೆ ವೇಳೆ ಕಲ್ಲೆಸೆತವೂ ಉಂಟಾಗಿದೆ. ಪೋಲೀಸರು ಸ್ಥಳ ಸಂದರ್ಶನ ನಡೆಸಿ ತನಿಖೆ ಕೈಗೆತ್ತಿಕೊಂಡರು. ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದರು.



