ಮುಳ್ಳೇರಿಯ: ದಶಕಗಳ ಬಳಿಕ ಪ್ರಸ್ತುತ ವರ್ಷ ಅನಿರೀಕ್ಷಿತವಾದ ಬೇಸಿಗೆ ಮಳೆ ಸುರಿದಿದ್ದು ಜಿಲ್ಲೆಯ ಜೀವನದಿಯೆಂದೇ ಖ್ಯಾತವಾಗಿರುವ ಪಯಸ್ವಿನಿ ತುಂಬಿ ಹರಿಯುತ್ತಿದೆ.ಈ ಮೂಲಕ ಜಿಲ್ಲೆಯ ಜನರು ಕೋವಿಡ್ ದಳ್ಳುರಿಯ ಮಧ್ಯೆಯೂ ಒಂದಷ್ಟು ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳುಗಳಲ್ಲಿ ಪಯಸ್ವಿನಿ ಬರಿದಾಗಿ ಕೃಷಿ ಸಹಿತ ನದಿಯನ್ನು ಇತರ ಅಗತ್ಯಗಳಿಗೆ ಬಳಸುವ ಲಕ್ಷಾಂತರ ಮಂದಿ ಸಂಕಷ್ಟಕ್ಕೊಳಗಾಗುತ್ತಿದ್ದುದು ಕಳೆದೊಂದು ದಶಕದ ಸಾಮಾನ್ಯ ಸ್ಥಿತಿಗತಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಹುಟ್ಟುಪಡೆದು ಪಶ್ಚಿಮಾಭಿಮುಖವಾಗಿ ಸಂಚರಿಸುವ ಪಯಸ್ವಿನಿ ಹೊಳೆ ಗಡಿ ಪ್ರದೇಶವಾದ ಜಾಲ್ಸೂರು, ದೇವರಗುಂಡದ ಮೂಲಕ ಕೇರಳದ ದೇಲಂಪಾಡಿ ಪಂಚಾಯತು ಪ್ರವೇಶಿಸಿ ತನ್ನ ಇಕ್ಕೆಲಗಳ ಸಾವಿರಾರು ಎಕ್ರೆ ಭೂಪ್ರದೇಶದ ಕೃಷಿ, ಕುಡಿಯುವ ಅಗತ್ಯಗಳಿಗೆ ನೀರೊದಗಿಸುವ ಜೀವನದಿಯಾಗಿ ಮಹತ್ವದ ಸ್ಥಾನ ಪಡೆದಿದೆ. ಕಾಸರಗೋಡು ನಗರಕ್ಕೆ ಮುಖ್ಯ ಜಲಪೂರೈಕೆಯ ಚಂದ್ರಗಿರಿ ಕುಡಿಯುವ ನೀರು ಯೋಜನೆ ಇದೇ ಪಯಸ್ವಿನಿಯ ಕೊಡುಗೆ.
ಆದರೆ ಕಳೆದ ಒಂದು-ಒಂದೂವರೆ ದಶಕಗಳಲ್ಲಿ ಪಯಸ್ವಿನಿಯ ಜಲಮಟ್ಟ ಕುಸಿದು ಮಾರ್ಚ್ ತಿಂಗಳಾಂತ್ಯದ ಬಳಿಕ ತೀವ್ರ ಜಲಪೂರೈಕೆಯ ಸಮಸ್ಯೆಗೆ ಕಾರಣವಾಗುತ್ತಿತ್ತು. ಬಳಕೆಯಲ್ಲಿ ಹೆಚ್ಚಳ, ಮರಳುಗಾರಿಕೆ ನಿಷೇಧ, ಮಳೆಗಾಲದಲ್ಲಿ ಮಳೆಯ ಕೊರತೆಗಳೇ ಮೊದಲಾದ ಕಾರಣಗಳಿಂದ ನದಿಯ ಒಡಲು ಬೇಗನೆ ಬರಡಾಗುತ್ತಿತ್ತು.
ಪ್ರಸ್ತುತ ವರ್ಷ ಮೇ.ಮೊದಲ ವಾರದಲ್ಲೇ ದಕ್ಷಿಣ ಕನ್ನಡ ಸಹಿತ ಕಾಸರಗೋಡಲ್ಲಿ ಲಭ್ಯವಾದ ದೊಡ್ಡ ಪ್ರಮಾಣದ ಮಳೆಯಿಂದ ಪಯಸ್ವಿನಿ ಸಂತಸದಿಂದ ಮೈತುಂಬಿ ಹರಿದು ಹಬ್ಬವನ್ನುಂಟುಮಾಡಿದ್ದಾಳೆ. ಕೃಷಿ ಅಗತ್ಯಗಳಿಗೆ ಅಲ್ಲಲ್ಲಿ ನಿರ್ಮಿಸಿದ ಕಟ್ಟಗಳನ್ನು ಮುರಿದು ದುಮ್ಮಿಕ್ಕಿ ಹರಿತಯುವ ಪಯಸ್ವಿನಿಯ ಪ್ರವಾಹ ಸಂತಸ ತಂದಿದೆ.



