ಮಂಜೇಶ್ವರ: ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹತ್ತು ಹಲವು ಕಾರಣಗಳಿಂದ ಜನರ ಮೆಚ್ಚುಗೆಗೆ ಪಾತ್ರವಾದ ವಿದ್ಯಾಸಂಸ್ಥೆಯಾಗಿ ಗಮನ ಸೆಳೆದಿದೆ.
ಕೊರೊನಾದ ಈ ಸಂದಿಗ್ಧ ಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ ಶಾಲೆಗೆ ಬರಲು ಅನಾನುಕೂಲವಾಗಿದ್ದು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮನೆಯಲ್ಲೇ ಚಟುವಟಿಕೆಗಳನ್ನು ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ತೀರ ಬಡತನದಲ್ಲಿ ಇರುವವರು, ಇಂಟರ್ನೆಟ್ ಉಪಯೋಗವನ್ನು ಮಾಡದವರಿಗೆ ಈ ವ್ಯವಸ್ಥೆ ಸಿಗದೇ ಇರುವುದನ್ನು ಮನಗಂಡು ಕುಳೂರು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿಯವರು ಮನೆಯಲ್ಲೇ ಕುಳಿತು ಮಾಡಬಹುದಾದ ಹಲವಾರು ಚಟುವಟಿಕೆಗಳನ್ನು ಒಳಗೊಂಡ ಚಿಣ್ಣರ ಅಂಗಳ ವರ್ಕ್ ಶೀಟ್ ಗಳನ್ನು ಜೆರಾಕ್ಸ್ ಮಾಡಿಸಿ, ಎಲ್ಲಾ ಮಕ್ಕಳ ಮನೆಗಳಿಗೆ ತೆರಳಿ ವಿತರಣೆ ಮಾಡುವ ಮೂಲಕ ಗಮನ ಸೆಳೆದಿರುವರು.
ಇಂತಹ ಸಿದ್ದ ಪಠ್ಯಗಳನ್ನು ಒದಗಿಸುವುದರಿಂದ ಶಾಲಾ ಮಕ್ಕಳಿಗೆ ಮೊಬೈಲ್'ಗಳನ್ನು ನೋಡಿ ಚಟುವಟಿಕೆ ಮಾಡುವುದಕ್ಕಿಂತಲೂ ಹೆಚ್ಚು ಉತ್ತಮ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಜೊತೆಗೆ ಮಕ್ಕಳನ್ನು, ಮಕ್ಕಳ ಹೆತ್ತವರನ್ನು ಸಮೀಪಿಸಿ ಯೋಗ ಕ್ಷೇಮಗಳನ್ನು ವಿಚಾರಿಸಲು ಅನುಕೂಲವಾಯಿತು. ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟ, ಶಾಲಾಭಿಮಾನವನ್ನು ಮೆರೆದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲರವರಿಗೆ ಶಾಲಾ ಪರವಾಗಿ, ಮಕ್ಕಳ ಹೆತ್ತವರ ಪರವಾಗಿ ಅಭಿನಂದನೆಗಳ ಮಹಾಪೂರ ಇದೀಗ ಹರಿದುಬರುತ್ತಿದೆ.



