ಕೊಲ್ಲಂ: ಎರಡು ಬಾರಿ ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆಗೈದ ಪತಿ ಹಾಗೂ ಈತನಿಗೆ ಸಹಕರಿಸಿದ ಇಬ್ಬರು ಹಾವಾಡಿಗರನ್ನು ಕೊಲ್ಲಂ ಜಿಲ್ಲೆಯ ಅಂಜಾಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಂಜಾಲ್ ಏರಂವೆಳ್ಳಾಚ್ಚೇರಿ ನಿವಾಸಿ ಉತ್ತರಾ(25)ಅವರು ತನ್ನ ತಾಯಿ ಮನೆಯಲ್ಲಿ ಮೇ 7ರಂದು ನಾಗರಹಾವು ಕಡಿದ ಪರಿಣಾಮ ಮೃತಪಟ್ಟಿದ್ದರು. ಇವರ ಪತಿ ಸೂರಜ್, ಇವರಿಗೆ ಹಾವು ಪೂರೈಸಿದ್ದ ಇಬ್ಬರು ಹಾವಾಡಿಗರು ಬಂಧಿತರು.
ಸೂರಜ್ ಬೇರೊಬ್ಬಾಕೆಯನ್ನು ಪ್ರೀತಿಸುತ್ತಿದ್ದು, ಈಕೆಯನ್ನು ವಿವಾಹವಾಗುವ ನಿಟ್ಟಿನಲ್ಲಿ ಪತ್ನಿಯನ್ನು ಕೊಲೆಗೈಯಲು ಸಂಚುರೂಪಿಸಿರುವುದಾಗಿ ಸಂಶಯಿಸಲಾಗಿದೆ. ಈ ಹಿಂದೆ ಮಾರ್ಚ್ 2ರಂದು ಉತ್ತರಾಗೆ ಪತಿ ಮನೆಯಲ್ಲಿ ಹಾವು ಕಡಿದಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದರು. ಅಷ್ಟೊಂದು ವಿಷಕಾರಿಯಲ್ಲದ ಹಾವು ಇದಾಗಿರುವುದರಿಂದ ಜೀವಹಾನಿ ಸಂಭವಿಸಿರಲಿಲ್ಲ. ನಂತರ ವಿಶ್ರಾಂತಿಗಾಗಿ ತವರಿಗೆ ತೆರಳಿದ್ದ ಉತ್ತರಾ ಅವರನ್ನು ಎರಡನೇ ಬಾರಿಗೆ ವಿಷಪೂರಿತ ನಾಗರಹಾವಿನಿಂದ ಕಚ್ಚಿಸಿ ಪತಿ ಕೊಲೆಗೈದಿರುವ ಬಗ್ಗೆ ದೂರಲಾಗಿತ್ತು. ಉತ್ತರಾ ಮಲಗಿದ್ದ ಕೊಠಡಿ ವಾತಾನುಕೂಲಿತವಾಗಿದ್ದು, ಕಿಟಿಕಿ ಬಾಗಿಲು ಭದ್ರವಾಗಿದ್ದರೂ, ಹಾವು ಹೇಗೆ ಒಳಸೇರಿಕೊಂಡಿತ್ತು ಎಂಬ ಬಗ್ಗೆ ಮನೆಯವರಿಗೂ ಸಂಶಯ ಕಾಡಿತ್ತು. ಪತಿಯೇ ಕೊಲೆ ನಡೆಸಿರುವುದಾಗಿ ಉತ್ತರಾ ಅವರ ಹೆತ್ತವರು ದೂರು ನೀಡಿದ್ದರು.


