ತ್ರಿಶೂರ್: ತ್ರಿಶೂರ್ ಜಿಲ್ಲೆಯಲ್ಲಿ ನಿನ್ನೆ ತೀವ್ರ ನಿಗಾದಲ್ಲಿದ್ದ ವಯೋವೃದ್ದೆಯೋರ್ವರು ಮರಣಹೊಂದುವ ಮೂಲಕ ಒಟ್ಟು ರಾಜ್ಯದ ಕೋವಿಡ್ ಮರಣ ಸಂಖ್ಯೆ ಐದಕ್ಕೇರಿದೆ. ಮೃತರನ್ನು ಚಾವಕ್ಕಾಡ್ ನಿವಾಸಿ ಖದೀಜಾಕುಟ್ಟಿ (73) ಎಂದು ಗುರುತಿಸಲಾಗಿದೆ. ಅವರು ಮುಂಬೈನಿಂದ ಬುಧವಾರ ಚಾವಕ್ಕಾಡ್ ತಲುಪಿದ್ದರು. ಮುಂಬೈಯಿಂದ ಪಾಲಕ್ಕಾಡ್‍ಗೆ ವಿಶೇಷ ವಾಹನದಲ್ಲಿ ಇತರ ಮೂವರೊಂದಿಗೆ ಆಗಮಿಸಿದ್ದರು. ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಮುಂಜಾನೆ ಚಾವಕ್ಕಾಡ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ರೋಗಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ, ಸರ್ಕಾರ ಅವರನ್ನು ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲು ನಿರ್ಧರಿಸುತ್ತಿರುವಂತೆ ನಿಧನರಾದರು. ಅವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರು. ಅವರ ಸಕಾರಾತ್ಮಕ ಫಲಿತಾಂಶಗಳನ್ನು ಅನುಸರಿಸಿ ಆಕೆಯ ಮಗ ಮತ್ತು ಆಂಬ್ಯುಲೆನ್ಸ್ ಚಾಲಕನನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಗೆ ಒಳಪಡಿಸಿದೆ.
ಖದೀಜಾಕುಟ್ಟಿ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದರೂ, ಅದು ಕೋವಿಡ್ ಮರಣವೆಂದು ಘೋಶಿಸಲು ಅಧಿಕೃತರು ಮೊದಲು ಹಿಂದೇಟು ಹಾಕಿದ್ದರು. ಅವರ ಪರೀಕ್ಷಾ ಫಲಿತಾಂಶ ತಡ ರಾತ್ರಿಯಷ್ಟೇ ಲಭ್ಯವಾಗಿದ್ದು ಬಳಿಕ ಕೋವಿಡ್ ಮರಣವೆಂದು ಘೋಶಿಸಲಾಯಿತು. ಆದರೆ ಫಲಿತಾಂಶ ಲಭ್ಯವಾಗುವಲ್ಲಿ ತಡವಾಗಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.


