ಕಾಸರಗೋಡು: ದೀರ್ಘ ಕಾಲದ ನಂತರ ಕಾಸರಗೋಡಿನಲ್ಲಿ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‍ಗಳು ಸಂಚಾರ ಆರಂಭಿಸಿದೆ. ಗುರುವಾರ 24 ಕೆಎಸ್ಸಾರ್ಟಿಸಿ ಬಸ್‍ಗಳು ವಿವಿಧ ರೂಟ್‍ಗಳಲ್ಲಿ ಸಂಚಾರ ನಡೆಸಿತು. ಕೆಲವೊಂದು ಖಾಸಗಿ ಬಸ್‍ಗಳೂ ರಸ್ತೆಗಿಳಿದಿತ್ತು. ಮಂಗಳೂರು, ಪುತ್ತೂರು, ಸುಳ್ಯ ತೆರಳುವ ಕೆಎಸ್ಸಾರ್ಟಿಸಿ ಬಸ್‍ಗಳು ಮಂಜೇಶ್ವರ, ಪೆರ್ಲ, ಮುಳ್ಳೇರಿಯ ವರೆಗೆ ಮಾತ್ರ ಸಂಚಾರ ನಡೆಸಿದೆ.
ಮಂಜೇಶ್ವರಕ್ಕೆ 7, ಪೆರ್ಲಕ್ಕೆ 3, ಮುಳ್ಳೇರಿಯ 4, ಕಾಞಂಗಾಡು 6, ಚೆರ್ವತ್ತೂರು 3 ಹಾಗೂ ಪೊಯಿನಾಚಿಗೆ ಒಂದು ಬಸ್ ಸಂಚಾರ ನಡೆಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ಸಂಚಾರ ಆರಂಭಿಸುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕ್ ಧರಿಸಿ, ಸಾನಿಟೈಸರ್ ಅಳವಡಿಸಿದವರಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರಿಗೆ ಸ್ಯಾನಿಟೈಸ್ ವಿತರಿಸಿದರು. ಸಾಮಾಜಿಕ ಅಂತರ ಪಾಲನೆಯ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಆಸನಗಳಲ್ಲಿ ನಿಗದಿತ ಅಂತರದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗಿತ್ತು.

