ಕಾಸರಗೋಡು: ರಾಜ್ಯ ಸರ್ಕಾರದ ಸುಭಿಕ್ಷ ಕೇರಳಂ ಯೋಜನೆಯ ಆಶಯಕ್ಕೆ ಸರಕಾರಿ ಸಿಬ್ಬಂದಿಯೂ ಮಾದರಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಮೃಗಸಂರಕ್ಷಣೆ ಇಲಾಖೆಯ ಸಿಬ್ಬಂದಿ ಈ ಉದ್ದೇಶದೊಂದಿಗೆ ರಂಗದಲ್ಲಿದ್ದಾರೆ. ಜಿಲ್ಲೆಯ ಶಾಶ್ವತ ನಿವಾಸಿಗಳಾದ ಇಲಾಖೆಯ ಸಿಬ್ಬಂದಿ 5 ರಿಂದ 10 ಮೊಟ್ಟೆಕೋಳಿಗಳನ್ನು ಗೂಡುಗಳಲ್ಲಿ ಸಾಕುತ್ತಿದ್ದಾರೆ. ಮನೆಗಳ ಆಹಾರ ತ್ಯಾಜ್ಯಗಳನ್ನು ಈ ಕೋಳಿಗಳಿಗೆ ತಿನಿಸಾಗಿ ನೀಡುತ್ತಿದ್ದಾರೆ. ಈ ಮೂಲಕ ಅಡುಗೆಮನೆ ಅಂಗಳದಲ್ಲಿ ಕೋಳಿಸಾಕಣೆ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದ್ದಾರೆ.
ಇದರ ಜೊತೆಗೆ ಕೃಷಿ ಇಲಾಖೆಯಿಂದ ತರಕಾರಿ ಬೀಜ ಪಡೆದುಕೊಂಡು, ಮನೆಯಂಗಳದಲ್ಲಿ ಗ್ರೋಬ್ಯಾಗ್ ಗಳಲ್ಲಿ ತರಕಾರಿ ಕೃಷಿ ನಡೆಸುತ್ತಿದ್ದಾರೆ. ಈ ಕೃಷಿಗೆ ಕೋಳಿಗಳ ವಿಸರ್ಜನೆಯನ್ನು ಗೊಬ್ಬರವಾಗಿ ಬಳಸುತ್ತಿದ್ದಾರೆ. ಈ ಮೂಲಕ ಮನೆಗೆ ಬೇಕಾದ ಮೊಟ್ಟೆ, ತರಕಾರಿಗಳನ್ನು ತಮ್ಮಲ್ಲೇ ಪಡೆಯಲಾಗುತ್ತಿದೆ.
1970ನೇ ಇಸವಿಯಲ್ಲಿ ಲೇರಳ ಇತರ ರಾಜ್ಯಗಳಿಗೆ ಮೊಟ್ಟೆ ವಿತರಣೆ ನಡೆಸುವಷ್ಟು ಸ್ವಾವಲಂಬಿಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಮೊಟ್ಟೆಗಾಗಿ ಇತರ ರಾಜ್ಯಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗತವೈಭವವನ್ನು ಮರಳಿ ತರುವ ಉದ್ದೇಶದಿಂದ ಸರಕಾರಿ ಸಿಬ್ಬಂದಿ ಹೀಗೊಂದು ಆಶಯದೊಂದಿಗೆ ರಂಗಕ್ಕಿಳಿದಿದ್ದಾರೆ.
ಈ ಯೋಜನೆಯ ಯಶಸ್ಸಿಗಾಗಿ ಜಿಲ್ಲೆಯ ಚೀಫ್ ವೆಟರ್ನರಿ ಅಧಿಕಾರಿಯ ನೇತೃತ್ವದಲ್ಲಿ ಸಹಾಯಕ ನಿರ್ದೇಶಕರಿಂದ ತೊಡಗಿ ಕೆಳಸ್ತರ ಸಿಬ್ಬಂದಿ ವರೆಗೆ ಎಲ್ಲ ನೌಕರರೂ ಮತ್ತು ಅವರ ಪ್ರತಿನಿಧಿಗಳನ್ನು ಅಳವಡಿಸಿ ತಂಡವೊಂದನ್ನು ರಚಿಸಲಾಗಿದೆ. ಯೋಜನೆಯ ಪೂರ್ಣ ವೆಚ್ಚವನ್ನೂ ಆಯಾ ಸಿಬ್ಬಂದಿಯೇ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಇತರ ಸರಕಾರಿ ಇಲಾಖೆಗಳ ಸಿಬ್ಬಂದಿಯೂ ಇದೇ ಆಶಯದೊಂದಿಗೆ ರಂಗಕ್ಕಿಳಿಯುವ ನಿರೀಕ್ಷೆಗಳಿವೆ.


