ಕಾಸರಗೋಡು: ಕಾಸರಗೋಡು ಜಿಲ್ಲೆ ರಚನೆಗೊಂಡು 36 ವರ್ಷ ಪೂರ್ತಿಗೊಂಡಿರುವ ವೇಳೆ ಒಂದಿಡೀ ನಾಡಿನ ಕನಸು ನನಸಾದ ಕೃತಾರ್ಥತೆಯೂ ಜತೆಗಿದೆ. ಜಿಲ್ಲೆ ಯೌವನದಲ್ಲಿ ತುಡಿಯುತ್ತಿರುವ ವೇಳೆ ಹಿಂದಿನ ಬಾಲಪೀಡೆಗಳೆಲ್ಲ ತೊಲಗಿ ಎಲ್ಲ ವಲಯಗಳಲ್ಲೂ ದಾಪುಗಾಲಿಡುತ್ತಿದೆ. ಅದರಲ್ಲೂ ಆರೋಗ್ಯ ವಲಯದಲ್ಲಿ ನಡೆಸಿರುವ ಸಾಧನೆ ಶ್ಲಾಘನೀಯವಾಗಿದೆ. ಈ ಹಂತದಲ್ಲಿ ಕಾಸರಗೋಡಿನ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಸರಕಾರಿ ಮೆಡಿಕಲ್ ಕಾಲೇಜು ಆರಂಭವಾಗಿರುವುದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ವಿಚಾರವಾಗಿದೆ. ಪರಿಣತ ಚಿಕಿತ್ಸೆಗಾಗಿ ಮಂಗಳೂರು ಸಹಿತ ಮಹಾನಗರಗಳ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವುದು ಇಲ್ಲಿನ ಜನತೆಗೆ ಅನಿವಾರ್ಯವಾಗಿತ್ತು. ಈ ವೇಳೆ ನಡೆಯುವ ದುಬಾರಿ ವೆಚ್ಚ, ಪ್ರಯಾಣ ಇತ್ಯಾದಿ ಸಂಕಷ್ಟದ ನಡುವೆ ಸ್ವಂತನಾಡಲ್ಲಿ ಸರಕಾರಿ ವಲಯದ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. 2012 ಮಾರ್ಚ್ ತಿಂಗಳಲ್ಲಿ ಆಡಳಿತಾನುಮತಿ ಪಡೆದ ಮೆಡಿಕಲ್ ಕಾಲೇಜಿಗೆ 2013 ನ.30ರಂದು ಶಿಲಾನ್ಯಾಸ ನಡೆದಿತ್ತು. ನಂತರ ವಿವಿಧ ಕಾರಣಗಳಿಂದ ನಿರ್ಮಾಣ ಚಟುವಟಿಕೆಗಳು ವಿಳಂಬವಾಗುತ್ತಲೇ ಸಾಗಿತ್ತು. 4 ಅಂತಸ್ತಿನ ಅಕಾಡೆಮಿಕ್ ಬ್ಲಾಕ್ ನಿರ್ಮಾಣ ಕಳೆದ ಜನವರಿಯಲ್ಲಿ ಪೂರ್ತಿಗೊಂಡಿತ್ತು. ಇದಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 30 ಕೋಟಿ ರೂ. ವೆಚ್ಚಮಾಡಲಾಗಿತ್ತು. ಜೊತೆಗೆ ಸಿಬ್ಬಂದಿಗಾಗಿ ಕ್ವಾರ್ಟರ್ಸ್, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಪ್ಯಾಕೇಜ್ ನಲ್ಲಿ 29.8 ಕೋಟಿ ರೂ. ಮೀಸಲಿರಿಸಲಾಗಿದೆ.
ಕುಡಿಯುವ ನೀರಿನ ಪ್ಲಾಂಟ್ ಸ್ಥಾಪನೆಗೆ 8 ಕೋಟಿ ರೂ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಜಲಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಮೆಡಿಕಲ್ ಕಾಲೇಜಿಗೆ ಯಾತ್ರಾ ಸೌಲಭ್ಯ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲಲಿ 9 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಡ್ಕ ಮೆಡಿಕಲ್ ಕಾಲೇಜು-ಏಳ್ಕಾನ ರಸ್ತೆ ಅಭಿವೃದ್ಧಿ ಗೊಳಿಸಲಾಗಿದೆ. ಮೆಡಿಕಲ್ ಕಾಲೇಜಿಗಿರುವ ಮುಗು-ಮುಂಡ್ಯತ್ತಡ್ಕ-ಬಜಾನ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ಟೆಂಡರ್ ಕ್ರಮ ಪೂರ್ಣಗೊಂಡಿದೆ. ಇತರ ತತ್ಸಂಬಂಧಿ ಚಟುವಟಿಕೆಗಳಿಗೂ ನಿಧಿ ಮೀಸಲಿರಿಸಿಲಾಗಿದೆ.
ಕೋವಿಡ್ ಆತಂಕಕ್ಕಿಂತ ಮೊದಲು ಮಾ.14ರಂದು ಮೆಡಿಕಲ್ ಕಾಲೇಜಿನ ಉದ್ಘಾಟನೆ ನಡೆಸುವುದಾಗಿ, ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅವರು ಉದ್ಘಾಟನೆ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕಗೊಂಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರತ್ಯೇಕ ಆದೇಶ ಪ್ರಕಾರ 4 ದಿನಗಳಲ್ಲಿ ಮೆಡಿಕಲ್ ಕಾಲೇಜನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಔಪಚಾರಿಕ ಉದ್ಘಾಟನೆ ನಡೆಯದೆಯೇ ನಾಡು ಅನುಭವಿಸುತ್ತಿರುವಸಂಕಷ್ಟ ಪರಿಹಾರಕ್ಕೆ ನೇರವಾಗಿ ಮೆಡಿಕಲ್ ಕಾಲೇಜೊಂದು ಚಟುವಟಿಕೆನಡೆಸುವುದು ಇತಿಹಾಸದಲ್ಲೇ ಬಹು ಅಪರೂಪವಾಗಿದೆ. ಈ ವರೆಗೆ 45 ಮಂದಿ ಕೋವಿಡ್ ಸೋಂಕು ಖಚಿತಗೊಂಡು ಈ ಕಾಲೇಜಿನಲ್ಲಿ ದಾಖಲಾಗಿದ್ದು, 20 ಮಂದಿ ಪೂರ್ಣಗುಣಮುಖರಾಗಿ ತೆರಳಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಯೋಜನೆ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿರುವರು.


