ಪಾಲಕ್ಕಾಡ್: ಭಾನುವಾರದ ಕೋವಿಡ್ ಪರೀಕ್ಷೆಯಲ್ಲಿ ರಾಜ್ಯದ ಇತರ ಜಿಲ್ಲೆಗಳಿಂತ ಹೆಚ್ಚುಮಂದಿ ಪಾಲಕ್ಕಾಡ್ ಜಿಲ್ಲೆಯಲ್ಲಿ ರೋಗ ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ತಿಂಗಳ 31 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿನ್ನೆ ಪಾಲಕ್ಕಾಡ್ ಜಿಲ್ಲೆಯೊಂದರಲ್ಲೇ 19 ರೋಗಿಗಳ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಾಕಲಾಗಿರುವ ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿರುವರು. ಕ್ವಾರಂಟೈನ್ ಉಲ್ಲಂಘಿಸುವವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ರಂಜಾನ್ ಆಗಿದ್ದರಿಂದ ಇಂದಿನಿಂದ ನಿಷೇಧಾಜ್ಞೆ ಜಾರಿಗೆ ಬಂದಿದೆ. ಏತನ್ಮಧ್ಯೆ, ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳು ಅಡೆತಡೆಗಳಿಲ್ಲದೆ ಪೂರ್ವನಿಗದಿಯಂತೆ ಎಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.
ನಿನ್ನೆ ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ 52 ಆಗಿ ವರದಿಯಾಗಿತ್ತು. ಪಾಲಕ್ಕಾಡ್ ವಾಳಯಾರ್ ಗಡಿಯಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಅಲ್ಲಿ 12 ಸೋಂಕಿತರು ಪತ್ತೆಯಾಗಿರುವರು. ಈ ಪೈಕಿ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ಮೂಲದವರೂ ಇರುವರು. ಇಬ್ಬರು ವಿದೇಶದಿಂದ ಬಂದವರು. ಜಿಲ್ಲೆಯ ಮೂವರು ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು ಪತ್ತೆಯಾಗಿದೆ. ಪ್ರಸ್ತುತ, ಜಿಲ್ಲೆಯ 45 ಜನರು ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಳಯಾರ್ ಗಡಿಯಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳೂ ಸೋಂಕಿತರ ಪಟ್ಟಿಯಲ್ಲಿದ್ದಾರೆ. ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯ ಇಬ್ಬರು ಸಿಬ್ಬಂದಿ, ದಾದಿಯರು ಮತ್ತು ವಾಳಯಾರ್ ಚೆಕ್ ಪೆÇೀಸ್ಟ್ನಲ್ಲಿ ಕರ್ತವ್ಯದಲ್ಲಿದ್ದ 22 ವರ್ಷದ ಆರೋಗ್ಯ ಕಾರ್ಯಕರ್ತರು ಈ ಪಟ್ಟಿಯಲ್ಲಿದ್ದಾರೆ. 11 ವರ್ಷದ ಬಾಲಕಿಯಲ್ಲೂ ಸೋಂಕು ಪತ್ತೆಯಾಗಿದೆ. ಹುಡುಗಿ ಗುಜರಾತ್ ಮೂಲದವಳಾಗಿದ್ದಾಳೆ.


