ಬದಿಯಡ್ಕ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಕರ್ತವ್ಯವನ್ನು ನಿಭಾಯಿಸುವಲ್ಲಿ ಬದಿಯಡ್ಕದ ನಾರಾಯಣ ಬಾರಡ್ಕ ಅವರೂ ಒಬ್ಬರಾಗಿದ್ದಾರೆ. ಕಾಸರಗೋಡು ಸರಕಾರೀ ಜನರಲ್ ಆಸ್ಪತ್ರೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಅವರು 14 ದಿನಗಳ ಕಾಲ ಕೋವಿಡ್ 19 ಚಿಕಿತ್ಸಾ ಘಟಕದಲ್ಲಿ ದುಡಿದಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಕರ್ತವ್ಯ ನಿರ್ವಹಿಸಬಹುದೇ ಎಂದು ನರ್ಸಿಂಗ್ ಸುಪರಿಟೆಂಡೆಂಟ್ ಅವರ ಕೇಳಿಕೆಯನ್ನು ಸಂತೋಷದಿಂದ ಸ್ವೀಕರಿಸಿ ಮಾರ್ಚ್ 24ರಿಂದ ಏಪ್ರಿಲ್ 7ರ ತನಕ 14 ದಿನಗಳ ಕರ್ತವ್ಯವನ್ನು ಆ ಸಮಯದಲ್ಲಿ ದಾಖಲಾಗಿದ್ದ 35ಮಂದಿ ಕೊರೊನಾ ಸೋಂಕಿತರ ಮಧ್ಯೆ ಕಳೆದಿದ್ದಾರೆ. ವಿವಿಧ ಚಾನೆಲ್‍ಗಳಿಗೆ ಇವರು ಸಂದರ್ಶನವನ್ನೂ ನೀಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅಂಬೇಡ್ಕರ್ ವಿಚಾರವೇದಿಕೆಯ ಹಿರಿಯ ಸದಸ್ಯರಾಗಿದ್ದಾರೆ. ಅವರ ಕರ್ತವ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವೇದಿಕೆಯು ಅಭಿನಂದನೆಯನ್ನೂ ಸಲ್ಲಿಸಿದೆ.


