ಕಾಸರಗೋಡು: ಕೇರಳದಲ್ಲಿರುವ 301 ಮದ್ಯ ಮಾರಾಟ ಕೇಂದ್ರಗಳನ್ನು ಏಕಕಾಲಕ್ಕೆ ತೆರೆದುಕಾರ್ಯಾಚರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ದಿನಾಂಕ ನಿಗದಿ ಇನ್ನಷ್ಟೆ ನಡೆಯಬೇಕಾಗಿರುವುದಾಗಿ ಅಬಕಾರಿ ಸಚಿವ ಟಿ.ಪಿ ರಾಮಕೃಷ್ಣನ್ ತಿಳಿಸಿದ್ದಾರೆ. ರಾಜ್ಯದಲ್ಲಿ ಮದ್ಯ ಮಾರಾಟಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕನ್ಸ್ಯೂಮರ್ ಫೆಡ್ ಹಾಗೂ ಬೀವರೇಜಸ್ ಕಾರ್ಪೋರೇಶನ್ ಔಟ್‍ಲೆಟ್‍ಗಲು ಕಾರ್ಯಾಚರಿಸುತ್ತಿದ್ದು, ಈ ಎರಡೂ ಔಟ್‍ಲೆಟ್‍ಗಳಲ್ಲಾಗಿ 301 ಮದ್ಯ ಮಾರಾಟ ಕೇಂದ್ರಗಳು ಕಾರ್ಯಾಚರಿಸಲಿದೆ. ಆದರೆ ಮದ್ಯಮಾರಾಟ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಈ ಹಿಂದಿಗಿಂತ ಮದ್ಯಮಾರಾಟ ಕಾಲಾವಧಿಯನ್ನು ಕಡಿತಗೊಳಿಸಲೂ ತೀರ್ಮಾನಿಸಲಾಗಿದೆ. ಕರೊನಾ ವೈರಸ್ ಸಂಕಷ್ಟದಿಂದ ಪಾರಾಗಲು ರಾಜ್ಯದಲ್ಲಿ ಮದ್ಯಮಾರಾಟದ ಮೇಲೆ ಶೇ. 10ರಿಂದ 35ರ ವರೆಗೆ ವಿಶೇಷ ಸೆಸ್ ವಿಧಿಸಲಾಗಿದ್ದು, ಮದ್ಯ ಬೆಲೆಯಲ್ಲಿ ಭಾರಿ ಹೆಚ್ಚಳವುಂಟಾಗುವ ಸಾಧ್ಯತೆಯಿದೆ.

