ಕಾಸರಗೋಡು: ಕೋವಿಡ್‍ನಿಂದಾಗಿ ಅಬುಧಾಬಿಯಲ್ಲಿ ಕಾಸರಗೋಡು ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಬುಧಾಬಿ ಬನಿಯಾಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊೈನಾಚಿ ವಡಕ್ಕೇಪರಂಬ್ ನಿವಾಸಿ ಐಸಾಕ್ (48) ಸೋಮವಾರ ರಾತ್ರಿ ನಿಧನರಾದರು. ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಅಬುದಾಬಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ನಡೆಸಿದ ಕೊವಿಡ್ ಪರೀಕ್ಷೆಗಳಲ್ಲಿ ವೈರಸ್ ಬಾಧಿಸಿರುವುದು ದೃಢಪಟ್ಟಿತ್ತು. ಭಾನುವಾರದಿಂದ ಐಸಾಕ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದನು. ಅವರು ಬನಿಯಾಸ್‍ನ ಅರೇಬಿಯನ್ ವ್ಯಕ್ತಿಯೋರ್ವರ ಬಳಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶವವನ್ನು ಅಬುಧಾಬಿ ಬನಿಯಾಸ್‍ನಲ್ಲಿ ಸಮಾಧಿ ಮಾಡಲಾಗುವುದು ಎಂದು ಸಂಬಂಧಿಕರು ಹೇಳಿದ್ದಾರೆ. ಅವರು ಎಂಟು ತಿಂಗಳ ಹಿಂದೆಯಷ್ಟೆ ಊರಿಗೆ ಭೇಟಿ ನೀಡಿ ಹಿಂತಿರುಗಿದ್ದರು.
ದಿ.ಅಬ್ದುರಹ್ಮಾನ್ ಹಾಜಿ ಮತ್ತು ಸಾರಮ್ಮ ದಂಪತಿಗಳ ಪುತ್ರನಾದ ಐಸಾಕ್ ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


