ಇಡುಕ್ಕಿ: ಕರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಗಡಿಗಳು ಮುಚ್ಚಲ್ಪಟ್ಟಿರುವುದರಿಂದ ಗಡಿನಾಡಿನ ಜನತೆ ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ. ತುರ್ತು ಅಗತ್ಯಗಳಿಗೆ ಗಡಿ ದಾಡಿದರೂ ಕ್ವಾರಂಟೈನ್ ಗೊಳಪಡಬೇಕಾದ ಕಠಿಣ ಕಾನೂನು ಇರುವುದರಿಂದ ಜನರ ಬದುಕು ಹೈರಾಟಗೊಂಡಿದೆ.
ಗಡಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎರಡೂ ರಾಜ್ಯಗಳ ಜನರು ಎಲ್ಲಾ ವ್ಯವಹಾರಗಳಿಗೂ ಅತ್ತಿಂದಿತ್ತ ಸಂಪರ್ಕ ಹೊಂದಿರುವವರಾಗಿದ್ದು ವ್ಯಾಪಾರ ವ್ಯವಹಾರ, ವಿವಾಹಗಳೂ ಪರಸ್ಪರ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಕರೊನಾ ನಿರ್ಬಂಧದಿಂದ ಇಡುಕ್ಕಿಯ ಕುಟುಂಬವೊಂದು ಇಂತಹದೇ ಸಮಸ್ಯೆಗೆ ಸಿಲುಕಿ ಕೊನೆಗೆ ವಿಶೇಷ ಉಪಕ್ರಮಗಳ ಮೂಲಕ ಗಮನ ಸೆಳೆದು ಸುದ್ದಿಯಾಗಿದ್ದಾರೆ.
ಇಡುಕ್ಕಿ ಜಿಲ್ಲಾ ನಿವಾಸಿ ಪ್ರಿಯಾಂಕಳ ವಿವಾಹ ಗಡಿಯಾಚೆಗಿನ ತಮಿಳುನಾಡು ನಿವಾಸಿಯೊಂದಿಗೆ ನಿಶ್ಚಯವಾಗಿತ್ತು. ಮಾ.22 ರಂದು ಇಡುಕ್ಕಿಯ ದೇವಾಲಯವೊಂದರಲ್ಲಿ ಇವರ ವಿವಾಹ ನಿಗದಿಯಾಗಿದ್ದರೂ ಲಾಕ್ ಡೌನ್ ಕಾರಣ ನಿಗದಿತ ದಿನದಂದು ಆಗಿರಲಿಲ್ಲ. ಕೊನೆಗೂ ಜೂ.7 ರಂದು ಇಡುಕ್ಕಿಯ ಕೇರಳ -ತಮಿಳುನಾಡು ಗಡಿ ಪ್ರದೇಶದಲ್ಲಿ ಸರಳ ವಿವಾಹ ನೆರವೇರಿತು.
ಕೇರಳದ ವಧು ಗಡಿ ತಪಾಸಣಾ ಕೇಂದ್ರವಾದ ಚಿನ್ನಾರ್ ಗೆ ಆಗಮಿಸಿದರು. ವರ ತಮಿಳುನಾಡು ನಿವಾಸಿ ರಾಬಿನ್ ಸನ್ ಮತ್ತವನ ಕುಟುಂಬದವರೂ ಗಡಿಗೆ ಬಂದರು. ಕೇರಳದಿಂದ ಆಗಮಿಸಿದವರು ಚೆಕ್ ಪೋಸ್ಟ್ ನ ಈಚೆಯೂ, ಅತ್ತ ತಮಿಳುನಾಡಿನಿಂದ ಆಗಮಿಸಿದವರು ಚೆಕ್ ಪೋಸ್ಟ್ ನ ಆಚೆಗೂ ಬಂದು ವಧೂವರರನ್ನು ಆಶೀರ್ವದಿಸಿದರು. ಹೂ ಮಾಲೆ, ದೀಪ ಮತ್ತು ಮದುವೆಗೆ ಅಗತ್ಯವಾದ ಎಲ್ಲಾ ವಸ್ತುಗಳನ್ನೂ ಸಾನಿಟೈಸ್ ಮಾಡಲಾಗಿತ್ತು. ಬ್ರೇಕ್ ದಿ ಚೈನ್ ಎಂಬಂತೆ ಎರಡೂ ಕಡೆಯವರೂ ದೂರದಲಲಿ ನಿಂತು ಆಶೀರ್ವದಿಸಿದರು. ಗಡಿ ದಾಟಿ ಯಾರೊಬ್ಬರೂ ಆಚೀಚೆ ಹೋಗದ ಕಾರಣ ಕ್ವಾರಂಟೈನ್ ಗೆ ಹೋಗಬೇಕಾದ ಪ್ರಮೇಯ ಎದುರಾಗಲಿಲ್ಲ. ಉಭಯ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾಯಿತು. ವಧು ಪ್ರಿಯಾಂಕ ಕೊಚ್ಚಿಯಲ್ಲಿ ನರ್ಸ್ ವೃತ್ತಿಯವಳಾಗಿದ್ದರೆ, ವರ ಕೊಯಂಬತ್ತೂರು ನಿವಾಸಿ ರಾಬಿನ್ ಸನ್ ದೆಹಲಿಯಲ್ಲಿ ಖಾಸಗೀ ಕಂಪೆನಿ ಉದ್ಯೋಗಿ.


