ಕಲಬುರಗಿ: ಹಿರಿಯ ಸಾಹಿತಿ ಗೀತಾ ನಾಗಭೂಷಣ್ (78) ಇಂದು ಸಂಜೆ 8.30ರ ಹೊತ್ತಿಗೆ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಾಡೋಜ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತೆಯಾಗಿರುವ ಗೀತಾ ನಾಗಭೂಷಣ್ ಅವರು ಕಲಬುರಗಿಯ ಸ್ವಸ್ತಿಕ ನಗರದಲ್ಲಿ ವಾಸಿಸುತ್ತಿದ್ದರು. ಇಂದು ಸಂಜೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
2010ರಲ್ಲಿ ಗದಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಇವರಾಗಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿಯಾಗಿದ್ದಾರೆ.
ಗೀತಾ ನಾಗಭೂಷಣ್ ಅವರು ಒಟ್ಟು 27 ಕಾದಂಬರಿಗಳನ್ನು ರಚಿಸಿದ್ದಾರೆ. ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಕಲಬುರ್ಗಿಯ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಲ್ಲಿ ಮಾರ್ಚ್ 25, 1942ರಲ್ಲಿ ಜನಿಸಿ ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ಗೀತಾ ನಾಗಭೂಷಣರು ಬಡತನ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆಗಳನ್ನೆಲ್ಲ ಮೀರಿ, ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನುಗಳಿಸಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು.






