HEALTH TIPS

ಜನೌಷಧಿ ಕೇಂದ್ರದಲ್ಲಿ ಗುಣಮಟ್ಟದ ಔಷಧಿ ಸಿಗುತ್ತದೆ, ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ:ಸದಾನಂದ ಗೌಡ

        ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಪರಿಕಲ್ಪನೆಯೊಂದಿಗೆ ರಸಗೊಬ್ಬರ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.
          ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. 
       ಭಾರತದ ಔಷಧೋದ್ಯಮವು ಮುಂಚಿನಿಂದಲೂ ಮುಂಚೂಣಿಯಲ್ಲಿದೆ. ಹೈಡ್ರೊಕ್ಸಿಕ್ಲೋರೋಕ್ವಿನ್‌, ಪೆರಾಸೆಟಾಮೋಲ್‌, ಅಜಿತ್ರೋಮೈಸಿನ್‌ ಮುಂತಾದ ಹಲವು ಔಷಧಗಳನ್ನು ನಾವು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತೇವೆ. ಆದರೆ ಅನೇಕ ಮೂಲ ರಾಸಾಯನಿಕಗಳಿಗಾಗಿ ನಾವಿನ್ನೂ ಚೈನಾದಂತಹ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಉದಾಹರಣೆಗೆ ಎಪಿಐ (API – Active Pharmaceutical Ingredients), ಡಿಐ (Drug Intermidiates) ಹಾಗೂ ಕೆಎಸ್ಸೆಮ್ (KSMs – Key Starting Materials) ವರ್ಗಕ್ಕೆ ಸೇರಿದ ಹಲವು ಮಾದರಿಯ ರಾಸಾಯನಿಕಗಳನ್ನು ಶೇಕಡಾ 60ರಿಂದ ಶೇಕಡಾ 90ರವರೆಗೆ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ.
ಈ ಮೂಲ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವುದೇ ಆರ್ಥಿಕವಾಗಿ ಲಾಭ ಎಂಬ ದೃಷ್ಟಿಯಿಂದ ನಮ್ಮ ಸ್ವದೇಶಿ ಕಂಪನಿಗಳು ಕೂಡಾ ಆಮದು ಮಾಡಿಕೊಳ್ಳುವ ಬಗ್ಗೆಯೇ ಹೆಚ್ಚು ಒಲವು ತೋರಿಸುತ್ತಿದ್ದವು. ಇನ್ನು ಮೇಲೆ ಈ ಮೂಲ ರಾಸಾಯನಿಕಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡಲು ಉತ್ತೇಜನ ನೀಡಲಿದ್ದೇವೆ. ಇದಕ್ಕಾಗಿ 6,940 ಕೋಟಿ ರೂಪಾಯಿಯ ಉತ್ಪಾದನಾ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ರೂಪಿಸಿದ್ದೇವೆ. ಪ್ರೋತ್ಸಾಹಧನ 2027-28ರವರೆಗೆ ಮುಂದುವರಿಯಲಿದೆ ಎಂದಿದ್ದಾರೆ.
        ರಾಯಚೂರಿನಲ್ಲಿ ಫಾರ್ಮಾ ಪಾರ್ಕ್: ದೇಶದ ಹಲವು ಕಡೆಗಳಲ್ಲಿ ಹೊಸದಾಗಿ “ಬಲ್ಕ್‌ ಡ್ರಗ್‌ ಪಾರ್ಕ್”ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದ್ದೇವೆ. ಇದಕ್ಕಾಗಿ 3 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ತೆಗೆದಿರಿಸಿದ್ದೇವೆ. ಕರ್ನಾಟಕದ ರಾಯಚೂರಿನಲ್ಲಿಯೂ ಇಂತಹದೊಂದು ಪಾರ್ಕ್‌ನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರವು ಅಗತ್ಯ ಭೂಮಿಯನ್ನು ಒದಗಿಸಿದ ಕೂಡಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
       ಜನೌಷಧ: ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಅಲೊಪತಿ ಔಷಧ ಒದಗಿಸುವ ನಮ್ಮ ಇಲಾಖೆಯ ಜನೌಷಧಿ ಕೇಂದ್ರಗಳು ದಿನದಿಂದ-ದಿನಕ್ಕೆ ಜನಪ್ರಿಯಗೊಳ್ಳುತ್ತಿವೆ. ಕಳೆದ ವರ್ಷ (2019-20) ಒಂದರಲ್ಲೇ ಹೊಸದಾಗಿ 1,250 ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ದೇಶದ ಬಹುತೇಕ ಜಿಲ್ಲೆಗಳಿಗೆ ಜನೌಷಧದ ಸೌಲಭ್ಯಗಳನ್ನು ವಿಸ್ತರಿಸಲಾಗಿದ್ದು ಸದ್ಯ ಒಟ್ಟು 6,331 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2018-19ರ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಜನೌಷಧ ಕೇಂದ್ರಗಳ ವಹಿವಾಟು ಶೇಕಡಾ 25ರಷ್ಟು ಹೆಚ್ಚಾಗಿದೆ. ವಿಶೇಷವೆಂದರೆ ಲಾಕ್ಡೌನ್‌ ಅವಧಿಯಲ್ಲೂ ವಹಿವಾಟು ಜಾಸ್ತಿಯಾಗಿದೆ ಎಂದರು.
      ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ನಮ್ಮ ಜನೌಷಧಿ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಅವರೆಡೂ ಒಂದೇ. ಆದರೆ ನಾವು ಅದನ್ನು ಯಾವುದೇ ಕಂಪನಿಗಳ ಬ್ರಾಂಡ್‌ಗಳಲ್ಲಿ ಮಾರುವುದಿಲ್ಲ. ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಮಾರುತ್ತೇವೆ. ನಮ್ಮ ಜನೌಷಧಗಳ ದರ ಶೇಕಡಾ 10ರಿಂದ ಶೇಕಡಾ 90ರಷ್ಟು ಕಡಿಮೆ ಇರುತ್ತದೆ. ದರ ಕಡಿಮೆ ಇದೆ ಅಂದಾಕ್ಷಣ ಗುಣಮಟ್ಟದ ಬಗ್ಗೆ ಸಂಶಯ ಬೇಡ. ಅತ್ಯಂತ ಕಟ್ಟುನಿಟ್ಟಿನ ಮಾನದಂಡ ಬಳಸಿ ಜನೌಷಧಗಳ ಗುಣಮಟ್ಟ ತಪಾಸಣೆ ಮಾಡಲಾಗುತ್ತದೆ. ಸಾಮಾನ್ಯ ಜನರ ಹಿತಕಾಯಲು ಕೇಂದ್ರವು ರಿಯಾಯಿತಿ ದರದಲ್ಲಿ ಅಗತ್ಯ ಔಷಧಗಳನ್ನು ಪೂರೈಸುತ್ತಿದೆ ಅಷ್ಟೆ. ಜನೌಷಧಿ ಮೂಲಕ ಕಳೆದ ವರ್ಷವೊಂದರಲ್ಲೇ ಜನಸಾಮಾನ್ಯರ ಅಂದಾಜು 3000 ಕೋಟಿ ರೂಪಾಯಿಯಷ್ಟು ಹಣ ಉಳಿತಾಯ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
         ಜನೌಷಧಿ ಆಪ್‌: ಇದೇ ವರ್ಷ ಅತ್ಯಂತ ಜನೋಪಯೋಗಿ “ಜನೌಷಧಿ ಆಪ್‌” ಅಭಿವೃದ್ಧಿಪಡಿಸಿದ್ದೇವೆ. ಸಾರ್ವಜನಿಕರು ಇದನ್ನು ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಇನ್ಸ್ಟಾಲ್‌ ಮಾಡಿಕೊಳ್ಳಬಹುದು. ಈ ಆಪ್ ಮೂಲಕ ತಮ್ಮ ಹತ್ತಿರದಲ್ಲಿ ಜನೌಷಧಿ ಕೇಂದ್ರ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಹಾಗೆಯೇ, ಆ ಜನೌಷಧಿ ಕೇಂದ್ರದಲ್ಲಿ ತಮಗೆ ಅಗತ್ಯವಿರುವ ಮಾತ್ರೆಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ವಯಸ್ಸಾದವರಿಗೆ ಮನೆ ಮನೆಗೇ ಔಷಧ ಒದಗಿಸುವ ಸೌಲಭ್ಯ ಕೂಡಾ ಆರಂಭಿಸಲಾಗಿದೆ. ಹೆಚ್ಚೆಚ್ಚು ಜನ ಇದರ ಸದುಪಯೋಗ ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯ ಎಂದು ಸಚಿವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries