ಕೊಚ್ಚಿ: ವಿಮಾನ ನಿಲ್ದಾಣದ ಮೂಲಕ ಅಕ್ರಮ ಚಿನ್ನ ದಾಟಿಸುವ ಆರೋಪದ ಹಿನ್ನೆಲೆಯಲ್ಲಿ ಯುಎಇ ಕಾನ್ಸುಲೇಟ್ ಅಧಿಕಾರಿ ಸ್ವಪ್ನಾ ಸುರೇಶ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅವರು ಕೇವಲ ತಾತ್ಕಾಲಿಕ ಉದ್ಯೋಗಿಯಾಗಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ದೂತಾವಾಸದ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಪ್ರಸ್ತುತ ಪರಾರಿಯಾಗಿದ್ದಾರೆ.
ಡಿಪ್ಲೊಮೇಟಿಕ್ ಬ್ಯಾಗೇಜ್ ಮೂಲಕ ಯುಎಇ ಮಾಜಿ ಕಾನ್ಸುಲೇಟ್ ಸರಿತ್ ಹಾಗೂ ಸ್ವಪ್ನ ಕೋಟ್ಯಂತರ ಮೌಲ್ಯದ ಅಕ್ರಮ ಚಿನ್ನ ಸಾಗಾಣಿಕೆ ನಡೆಸಿರುವರೆಂದು ದೂರಲಾಗಿತ್ತು. ಒಮ್ಮೆಯ ಸಾಗಣಿಕೆಗೆ ಇಬರಿಬ್ಬರಿಗೂ 25 ಲಕ್ಷ ರೂ. ಕಮಿಷನ್ ರೂಪದಲ್ಲಿ ಲಭ್ಯವಾಗುತ್ತಿದ್ದೆಂದು ವರದಿಗಳು ತಿಳಿಸಿವೆ. ಈ ಬಗ್ಗೆ ಕಸ್ಟಮ್ಸ್ ಇಲಾಖೆ ಸಮಗ್ರ ತನಿಖೆ ನಡೆಸಲಿದೆ. ಆದರೆ ಇದೀಗ ನಾಪತ್ತೆಯಾಗಿರುವ ಸ್ವಪ್ನಳ ಪತ್ತೆಗೆ ವ್ಯಾಪಕ ಬಲೆ ಮೀಸಲಾಗಿದೆ.
ಸರಿತ್ ಅವರ ನಕಲಿ ಗುರುತಿನ ಚೀಟಿ ಬಳಸಿ ಚಿನ್ನದ ಕಳ್ಳಸಾಗಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಇವರಲ್ಲದೆ ಇತರ ಐವರು ಆರೋಪಿಗಳಿದ್ದಾರೆ ಎಂದೂ ತಿಳಿದುಬಂದಿದೆ. ರಾಜ್ಯದ ಐಟಿ ಉದ್ಯೋಗಿಯೋರ್ವ ಇದರ ಹಿಂದಿನ ಸೂತ್ರದಾರ ಎನ್ನಲಾಗಿದೆ.
ಆಹಾರ ವಸ್ತು ಆಮದು ಮಾಡುತ್ತಿದ್ದ ಕಾರ್ಗೋ ವಿಮಾನವೊಂದರಲ್ಲಿ ಜೂ.30 ರಂದು 15 ಕೋಟಿ ಮೌಲ್ಯದ ಅಕ್ರಮ ಚಿನ್ನ ಪತ್ತೆಯಾಗಿತ್ತು. ಯುಎಇ ಡಿಪ್ಲೊಮೇಟಿಕ್ ಕಾರ್ಗೋದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅಕ್ರಮ ಚಿನ್ನ ಆಗಮಿಸಿರುವುದು ಗಂಭೀರತೆಯನ್ನು ಸೂಚಿಸಿದೆ. ಈ ಬಗ್ಗೆ ರಹಸ್ಯವಾಗಿ ಲಭ್ಯವಾದ ಮಾಹಿತಿಯ ಮೇರೆಗೆ ಕೇಂದ್ರ ವಿದೇಶಾಂಗ ಇಲಾಖೆಯ ನಿರ್ದೇಶಾನುಸಾರ ಕಸ್ಟಂಸ್ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಚಿನ್ನ ಪತ್ತೆಹಚ್ಚಲಾಗಿತ್ತು. ಬಳಿಕ ಸರಿತ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ತಪಾಸಣೆ ವೇಳೆ ಸರಿತ್ ಅವರ ಗುರುತಿನ ಚೀಟಿ ನಕಲಿ ಎಂದು ತಿಳಿದುಬಂದಿದ್ದು, ಆತನನ್ನು ವಜಾ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಲಾಯಿತು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಕಸ್ಟಮ್ಸ್ ನಿರ್ಧರಿಸಿದೆ.


