ಕುಂಬಳೆ: ಪಾರಂಪರಿಕ ಮೀನುಗಾರಿಕೆಗೆ ಧಕ್ಕೆ ತರುವ ರೀತಿಯಲ್ಲಿ ಇತರ ಜಿಲ್ಲೆ ಹಾಗು ರಾಜ್ಯಗಳಿಂದ ಆಗಮಿಸಿ ಮೀನು ಹಿಡಿಯುತ್ತಿದ್ದು, ಈ ರೀತಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಲ್ಲಿನ ಮೀನುಗಾರರು ಆಗ್ರಹಿಸಿದ್ದಾರೆ.
ಈ ರೀತಿಯ ಮೀನುಗಾರಿಕೆಯಿಂದ ಪಾರಂಪರಿಕ ಮೀನುಗಾರಿಕೆ ಸಂಪೂರ್ಣ ವಿನಾಶದತ್ತ ಸಾಗಲಿರುವುದಲ್ಲದೆ ಮೀನಿನ ಸಂತತಿಯೂ ನಾಶಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹೊಸದುರ್ಗದಿಂದ ನೀಲೇಶ್ವರ ಕಡಪ್ಪುರ ವರೆಗಿನ 1500 ಕ್ಕೂ ಹೆಚ್ಚು ಮಂದಿ ಪಾರಂಪರಿಕ ಮೀನುಗಾರರು ಹೋರಾಟಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಕೋವಿಡ್ ನಿರ್ದೇಶ ಪಾಲಿಸದೆ ಬೃಹತ್ ಬಲೆಗಳನ್ನು ಉಪಯೋಗಿಸಿ ಮೀನು ಹಿಡಿಯುತ್ತಿರುವವರನ್ನು ನಿಯಂತ್ರಿಸುವಂತೆ ಅವರು ಆಗ್ರಹಿಸಿದ್ದಾರೆ. ಈ ಮೀನುಗಾರರು ಬೃಹತ್ ಬಲೆಯೊಂದಿಗೆ ಸಮುದ್ರದಲ್ಲಿ ಮೀನು ಹಿಡಿಯುತ್ತಿರುವುದರಿಂದ ಪಾರಂಪರಿಕ ಮೀನುಗಾರಿಕೆಗೆ ತೊಡಕುಂಟಾಗುತ್ತಿದೆ.
ಇಂಧನ ಬೆಲೆಯೇರಿಕೆ, ಐಸ್ ಲಭ್ಯತೆಯಲ್ಲಿನ ಕೊರತೆ ಪಾರಂಪರಿಕ ಮೀನುಗಾರರ ಸಂಕಷ್ಟ ಹೆಚ್ಚಿಸಿದೆ. ಅಸಂವಿಧಾನಿಕ ರೀತಿಯ ಮೀನುಗಾರಿಕೆ ತಡೆಯದಿದ್ದಲ್ಲಿ ಇಲ್ಲಿನ ಮೀನುಗಾರರು ಅವರನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


