ಕುಂಬಳೆ: ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಪುನಶ್ಚೇತನದ ಕನಸು ಮತ್ತೆ ಚಿಗುರುಡೆದಿದ್ದು ಸರ್ಕಾರ ನೂತನ ಸಮಿತಿಗೆ ರೂಪುನೀಡಿದೆ.
ಕಲಾಕ್ಷೇತ್ರದ ಆರಂಭದ ಅಧ್ಯಕ್ಷರಾಗಿದ್ದ ಎಂ.ಶಂಕರ ರೈ ಮಾಸ್ತರ್ ಅವರನ್ನು ಇದೀಗ ಮತ್ತೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಉಪಾಧ್ಯಕ್ಷೆಯಾಗಿ ಕಮಲಾಕ್ಷಿ ಬಾಯಾರ್, ಕಾರ್ಯದರ್ಶಿಯಾಗಿ ಡಿ,ಬೂಬ ಪಾವೂರು, ಸದಸ್ಯರುಗಳಾಗಿ ಜಯರಾಮ ಮಂಜತ್ತಾಯ ಎಡನೀರು, ಸತೀಶ ಅಡಪ ಸಂಕಬೈಲು, ಶಶಿಕಲಾ ಟೀಚರ್ ಮುಜುಂಗಾವು,ಕೃಷ್ಣ ನಾಯ್ಕ, ರಾಮ ಸಾಲ್ಯಾನ್ ಮಂಗಲ್ಪಾಡಿ, ಬೇಬಿ ಶೆಟ್ಟಿ ಕಯ್ಯಾರ್, ವಿಷ್ಣುಪ್ರಸಾದ್ ಪಡ್ರೆ, ಗಣೇಶ್ ಶೆಟ್ಟಿ ಕಿದೂರು, ರಾಮಕೃಷ್ಣ ಮಯ್ಯ ಸಿರಿಬಾಗಿಲು, ದಿವಾಣ ಶಿವಶಂಕರ ಭಟ್, ಶ್ರೀಧರ ಪಡ್ರೆ, ದಯಾನಂದ ಪಾವೂರು, ನಾರಾಯಣ ಮೂಲಡ್ಕ ಹಾಗೂ ಜಯಂತಿ ಸುವರ್ಣ ಅಡ್ಕ ಅವರನ್ನು ಆಯ್ಕೆಮಾಡಲಾಗಿದೆ.
2008-09 ರಲ್ಲಿ ಅಂದಿನ ಎಡರಂಗದ ಅಧಿಕಾರಾವಧಿಯಲ್ಲಿ ಅಂದಿನ ಮಂಜೇಶ್ವರ ಶಾಸಕ ಸಿ.ಎಚ್.ಕುಂಞಂಬು ಅವರ ಮಹತ್ವಾಕಾಂಕ್ಷೆಯಿಂದ ಪಾರ್ತಿಸುಬ್ಬ ಕಲಾಕ್ಷೇತ್ರ ರಚನೆಗೊಂಡಿತ್ತು. 20 ಲಕ್ಷ ರೂ.ಗಳ ಆರಂಭಿಕ ನಿಧಿಯನ್ನೂ ಸರ್ಕಾರ ಮೀಸಲಿರಿಸಿತ್ತು. ಜೊತೆಗೆ ಕಲಾಕ್ಷೇತ್ರದ ಹಿರಿಮೆ ಎಂಬಂತೆ ಮುಜುಂಗಾವು ಶ್ರೀಪಾರ್ಥಸಾರಥಿ ದೇವಾಲಯ ಪರಿಸರದಲ್ಲಿ 15 ಸೆಂಟ್ ಭೂಮಿಯನ್ನು ಖರಿದಿಸಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಿ 40 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಆರಂಭಿಸಲಾಗಿತ್ತು. ಆದರೆ ನಿರ್ಮಾಣ ಆರಂಭಗೊಂಡು ಒಂದೇ ವರ್ಷದಲ್ಲಿ ಮೊಟಕುಗೊಂಡು ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.


