ಉಪ್ಪಳ: ಕೊವಿಡ್ ಬಾಧಿಸಿ ಸಾವನ್ನಪ್ಪಿದ ಉಪ್ಪಳ ನಫಿಸಾ(74) ಅವರ ಅಂತ್ಯ ಸಂಸ್ಕಾರ ಶನಿವಾರ ಕೋವಿಡ್ ನಿಯಮಗಳಿಗನುಸಾರ ನಡೆಯಿತು. ಚಿಕಿತ್ಸೆ ಪಡೆಯುತ್ತಿದ್ದಾಗ ಉಪ್ಪಳ ಹಿದಾಯತ್ ನಗರದ ನಫೀಸಾ (74) ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದರು. ಅವರ ಶವವನ್ನು ಕೊನೆಯ ಬಾರಿಗೆ ಅವರ ಮಕ್ಕಳು, ಸೊಸೆಯಂದಿರು ಮತ್ತು ಸೋದರಳಿಯರು ವಿದ್ಯಾನಗರದ ಉದಯಗಿರಿಯಲ್ಲಿರುವ ಕೋವಿಡ್ ವೀಕ್ಷಣಾಲಯದಲ್ಲಿ ವೀಕ್ಷಿಸಿದರು.
ಜು. 11 ರಂದು ನಫಿಸಾರಿಗೆ ಕೋವಿಡ್ ಬಾಧಿಸಿರುವುದು ದೃಢಪಟ್ಟಿತ್ತು.ಬಳಿಕ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಶುಕ್ರವಾರ ರಾತ್ರಿ 11 ಗಂಟೆಗೆ ಮೃತಪಟ್ಟರು.
ನಫೀಸಾರ ಸಂಪರ್ಕದಿಂದ ಮೂರು ವರ್ಷ ಮತ್ತು 40 ದಿನಗಳ ಇಬ್ಬರು ಮೊಮ್ಮಕ್ಕಳು ಮತ್ತು ನೆರೆಹೊರೆಯವರಲ್ಲಿ ಸೋಂಕು ಇದೀಗ ದೃಢಪಡಿಸಲಾಗಿದೆ. ಇವರೆಲ್ಲರನ್ನೂ ಉದಯಗಿರಿಯ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ತಾಯಿಯ ದೇಹಕ್ಕೆ ಅಂತಿಮ ನಮನ ಸಲ್ಲಿಸಬೇಕೆಂದು ಮಕ್ಕಳು ಮಾಡಿದ ಮನವಿಯನ್ನು ಅನುಸರಿಸಿ, ಶಾಸಕ ಎಂ.ಸಿ.ಖಮರುದ್ದೀನ್ ಅವರ ಮನವಿಯ ಬಳಿಕ ಶವವಾಹನವನ್ನು ಉಪ್ಪಳಕ್ಕೆ ಹೋಗುವ ದಾರಿಯಲ್ಲಿ ಉದಯಗಿರಿ ಕೋವಿಡ್ ಸೆಂಟರ್ ಬಳಿ ನಿಲ್ಲಿಸಿ ಸಂಬಂಧಿಕರ ವೀಕ್ಷಣೆಗೆ ಅವಕಾಶ ನೀಡಲಾಯಿತು.
ಪಿಪಿಇ ಕಿಟ್‍ಗಳನ್ನು ಧರಿಸಿ, ಮಕ್ಕಳು ಕೋವಿಡ್ ಮಾನದಂಡಗಳನ್ನು ಅನುಸರಿಸಿ ತಾಯಿಯ ಅಂತ್ಯದರ್ಶನಗೈದರು. ಮಕ್ಕಳು ತಮ್ಮ ಜೀವನದಲ್ಲಿ ಮತ್ತೆಂದೂ ಭೇಟಿಯಾಗದ ತಾಯಿಯ ಮೃತ ಶರೀರವನ್ನು ಅನತಿ ದೂರದಿಂದಲೇ ನೋಡಬೇಕಾದ ಸ್ಥಿತಿ ಮತ್ತು ಪ್ರಾರ್ಥಿಸುವ ದೃಶ್ಯವು ಹೃದಯ ವಿದ್ರಾವಕವಾಗಿತ್ತು. ಬಳಿಕ ಉಪ್ಪಳಕ್ಕೆ ಆಗಮಿಸಿದ ಮೃತದೇಹವನ್ನು ಸುಮಾರು 10 ಜನರು ಉಪ್ಪಳ ಪೇಟೆಯ ಜಮಾ ಮಸೀದಿಯಲ್ಲಿ ಪ್ರಾರ್ಥಿಸಿ ಮಸೀದಿಯ ಸ್ಮಶಾನದಲ್ಲಿ ಕೋವಿಡ್ ನಿಬಂಧನೆಗಳಿಗೆ ಅನುಸಾರ ಸಮಾಧಿ ಮಾಡಲಾಯಿತು. ಮುಜೀಬ್ ಕಂಬಾರ್, ಗೋಲ್ಡನ್ ರಹಮಾನ್, ಬಿ.ಎಂ.ಮುಸ್ತಫಾ, ಮುಫಾಸಿ ಕೋಟ್ಟಾ, ಚೆಮ್ಮಿ ಪಂಚಾರ ಮತ್ತು ತಾಹಿರ್ ಉಪ್ಪಳ, ರಫೀಕ್ ಫೌಜಿಯಾ ಸಮಾಧಿ ಚಟುವಟಿಕೆಯ ನೇತೃತ್ವ ವಹಿಸಿದ್ದರು. ಅಂತ್ಯಕ್ರಿಯೆ ಸಂದರ್ಭ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಮತ್ತು ಗ್ರಾ.ಪಂ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಉಪಸ್ಥಿತರಿದ್ದರು.


