ಕಾಸರಗೋಡು: ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ ಕಾಸರಗೋಡು ಜಿಲ್ಲೆಯ ಕನ್ನಡಿಗ ವೈದ್ಯರಿಬ್ಬರು ರಾಷ್ಟ್ರೀಯ ವೈದ್ಯಕೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜನಾರ್ದನ ನಾಯ್ಕ್ ಹಾಗೂ ಡಾ.ನಾರಾಯಣ ಪ್ರದೀಪ್ ಅವರಿಗೆ ಪ್ರಶಸ್ತಿಯು ಲಭಿಸಲಿದೆ.
ನವದೆಹಲಿಯ ಭಾರತೀಯ ವೈದ್ಯಕೀಯ ಸಂಘವು ಪ್ರತೀ ವರ್ಷ ಜುಲೈ೧ರಂದು ವೈದ್ಯರ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದೆ.
ಡಾ.ಜನಾರ್ದನ ನಾಯ್ಕ್ :
ಐಎಂಎಯ ಕಾಸರಗೋಡು ಘಟಕದಲ್ಲಿ ಸಕ್ರಿಯರಾಗಿರುವ ಮಾನ್ಯ ಚುಕ್ಕಿನಡ್ಕದ ಕೊರಗು ನಾಯ್ಕ-ಪರಮೇಶ್ವರಿ ದಂಪತಿಗಳ ಪುತ್ರನಾಗಿದ್ದಾರೆ.
ಕೋವಿಡ್ -೧೯ರ ಈ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿದ್ದು ವಿಶೇಷ ತಜ್ಞ ವೈದ್ಯರಾಗಿ ಗಮನಸೆಳೆದ ಇವರು ೧೦೦ಕ್ಕಿಂತಲೂ ಹೆಚ್ಚು ಕೋವಿಡ್ ರೋಗಿಗಳನ್ನು ಗುಣಪಡಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ. ಇವರ ಚಿಕಿತ್ಸೆಯಲ್ಲಿ ಎಲ್ಲಾ ರೋಗಿಗಳೂ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ.
ಡಾ.ನಾರಾಯಣ ಪ್ರದೀಪ್ :
ಐಎಂಎ ಕಾಸರಗೋಡು ಘಟಕದ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಬದಿಯಡ್ಕದ ಪೆರ್ಮುಖ ಈಶ್ವರ ಭಟ್- ಕುಸುಮಾ ದಂಪತಿಗಳ ಪುತ್ರ. ಪ್ರಸ್ತುತ ಸನ್ನಿವೇಶದಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ಅಸಿಸ್ಟೆಂಟ್ ನೋಡಲ್ ಅಧಿಕಾರಿಯಾಗಿ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ಹಿರಿಮೆ ಇವರಿಗಿದೆ.

