ಕಾಸರಗೋಡು: ಕೋವಿಡ್ 19 ರ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ನಿಲ್ಲಿಸಬೇಕಾಗಿ ಬಂದುದರಿಂದಾಗಿ ಖಾಸಗಿ ಬಸ್ ಕಾರ್ಮಿಕರು ಕಳೆದ ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರಕಾರದ ತಪ್ಪಾದ ನಿಲುವಿನಿಂದಾಗಿ ಹಲವು ವರ್ಷಗಳಿಂದ ಸೊರಗುತ್ತಿರುವ ಮೋಟಾರು ವಲಯ ಕೋವಿಡ್‍ನಿಂದಾಗಿ ಬಂದ ಲಾಕ್ ಡೌನ್ ನೊಂದಿಗೆ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಆ ಬಳಿಕ ಉಂಟಾದ ಸಡಿಲಿಕೆಯಲ್ಲಿ ಕೆಲವು ಬಸ್‍ಗಳು ಓಡಾಟ ಆರಂಭಿಸಿದರೂ ಡೀಸೆಲ್ ಬೆಲೆ ಹೆಚ್ಚಳ, ಜನರಿಲ್ಲದ ಕಾರಣ ನಷ್ಟ ಉಂಟಾಗಿರುವುದಾಗಿ ಬಸ್ ಟ್ರಾನ್ಸ್‍ಫೆÇೀರ್ಟ್ ವರ್ಕರ್ಸ್ ಫೆಡರೇಶನ್(ಸಿಐಟಿಯು) ತಿಳಿಸಿದೆ.
ಬಸ್ ದರವನ್ನು ಹೆಚ್ಚಿಸಿದರೂ ಜನರಿಲ್ಲದ ಕಾರಣ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಬಸ್ ಸಂಚಾರ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಡ್ ಪೂರ್ಣವಾಗಿ ಸಂಪೂರ್ಣವಾಗಿ ತೊಲಗುವ ತನಕ ಸಾರ್ವಜನಿಕ ಬಸ್ ಸಂಚಾರ ಸಾಧ್ಯವಿಲ್ಲ. ಆದುದರಿಂದ ಈಗ ಕೆಲಸವಿಲ್ಲದೆ ಸಂಕಷ್ಟಪಡುವ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗಿರಿಕೃಷ್ಣನ್ ಮುಖ್ಯಮಂತ್ರಿ ಹಾಗು ಸಾರಿಗೆ ಸಚಿವ, ವಿತ್ತ ಸಚಿವರಿಗೆ ಮನವಿ ನೀಡಿದ್ದಾರೆ.

