ಬದಿಯಡ್ಕ: ಜಲ ಮತ್ತು ಮಣ್ಣು ಸಂರಕ್ಷಣೆಯ ಮೂಲ ಲಕ್ಷ್ಯದೊಂದಿಗೆ ನಬಾರ್ಡ್ ಸಹಕಾರದೊಂದಿಗೆ ಕಾರ್ಯಾಚರಿಸುತ್ತಿರುವ ವಿವಿಧ ಜಲಾನಯನ ಯೋಜನಾ ಸಮಿತಿಗಳಲ್ಲಿ ಒಂದೂವರೆ ದಶಕಗಳಿಂದ ಮುಗು ಜಲಾನಯನ ಯೋಜನೆ ಮುಂಚೂಣಿಯಲ್ಲಿದೆ. ಮುಗು ಜಲಾನಯನ ಯೋಜನಾ ಸಮಿತಿ ನೇತೃತ್ವದಲ್ಲಿ ಈಗಾಗಲೇ ಹತ್ತು ಹಲವು ಯೋಜನೆಗಳು ನಾಡಿಗೆ ಸಮರ್ಪಿಸಲ್ಪಟ್ಟಿದ್ದು ಸಮಗ್ರ ಅಭಿವೃದ್ದಿಯಲ್ಲಿ ತನ್ನದೇ ಕೊಡುಗೆಗಳಿಂದ ಗಮನ ಸೆಳೆದಿದೆ.
ಪ್ರಸ್ತುತ ನೀರ್ಚಾಲು ಪೇಟೆಯ ಸಮೀಪ ಮಹಾಜನ ವಿದ್ಯಾಭಿವೃದ್ದಿ ಸಂಘ ಕೊಡಮಾಡಿದ 3 ಎಕ್ರೆ ಬಂಜರು ಭೂಮಿಯಲ್ಲಿ ವಿವಿಧ ಬೆಳೆಗಳ ನಾಟಿ ಮಾಡುವ ಮೂಲಕ ನಿರ್ಲಕ್ಷ್ಯಿತ ಭೂಮಿಯಲ್ಲಿ ಹೊನ್ನಿನ ಬೆಳೆಯನ್ನು ಪಡೆಯುವ ಕಾಯಕವೊಂದಕ್ಕೆ ಇದೀಗ ಚಾಲನೆ ನಿಡಲಾಗಿದೆ.
ಪ್ರಸ್ತುತ 3 ಎಕ್ರೆ ಬಂಜರು ಭೂಮಿಯಲ್ಲಿ ಜಯ ಭತ್ತದ ತಳಿಯ ಕುಸುಲಕ್ಕಿ, ಸುವರ್ಣ ಗಡ್ಡೆ(ಕೇನೆ) ಮರಗೆಣಸು ಹಾಗೂ ಅರಸಿನ ಬೆಳೆಗಳ ನಾಟಿಗೆ ಬಿತ್ತನೆ ನಡೆಸಲಾಗಿದೆ. ಕಾಡು ಬೆಳೆದು ಸಂಪೂರ್ಣ ನಿರ್ಲಕ್ಷ್ಯಿತ ಭೂಮಿಯಾದ್ದರಿಂದ ನೆಲವನ್ನು ಅಗೆದು ಬೇಕಾದಲ್ಲಿ ದಂಡೆಗಳನ್ನು ನಿರ್ಮಿಸಿ ಹದಗೊಳಿಸಿ ಬಿತ್ತನೆ ನಡೆಸಲಾಗಿದೆ. ಈವರೆಗೆ ಸುಮಾರು 2 ಲಕ್ಷ ರೂ.ಗಳ ಖರ್ಚು ತಗಲಿದ್ದು ಇನ್ನೂ ಒಂದೂವರೆ ಲಕ್ಷ ರೂ.ಗಳ ಅಂದಾಜು ವೆಚ್ಚ ಲಗಲುವ ನಿರೀಕ್ಷೆ ಇದೆ.
ಜಲಾಯನ ಯೋಜನೆಯ ಅಧ್ಯಕ್ಷರಾದ ಜಯದೇವ ಖಂಡಿಗೆ, ಕಾರ್ಯದರ್ಶಿ ಶಿವಪ್ರಸಾದ್ ಎಚ್.ಎನ್ ಸಹಿತ 13 ಮಂದಿ ಸದಸ್ಯರುಗಳ ಮುಗು ಜಲಾನಯನ ಯೋಜನಾ ವ್ಯಾಪ್ತಿಯ ಸುಮಾರು 1550 ಹೆಕ್ಟೇರ್ ಭೂ ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ವ್ಯಾಪಕ ಕೃಷಿ, ಜಲ, ಮಣ್ಣು ಸಂರಕ್ಷಣಾ ಚಟುವಟಿಕೆಗಳ ಭಾಗವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು ನಬಾರ್ಡ್ ಸಹಿತ ಕೇಂದ್ರ, ರಾಜ್ಯ ಸರ್ಕಾರಗಳ ಗಮನ ಸೆಳೆದು ಅನುದಾನ, ಪ್ರಶಸಸ್ತಿಗಳನ್ನು ಬಾಚಿಕೊಳ್ಳುವಲ್ಲೂ ಯಶಸ್ವಿಯಾಗಿದೆ. 2019-20ನೇ ಸಾಲಿನಲ್ಲಿ ಜಲಾನಯನ ಯೋಜನೆಯ ಮೂಲಕ ಖಂಡಿಗೆ, ಪಡುಕೆರೆ, ಕಡಕಂಜಿ ಹಾಗೂ ಆನೆಮೂಲೆಗಳ ಪ್ರಮುಖ ಪ್ರಾಚೀನ ಸಾಂಪ್ರದಾಯಿಕ ಮದಕಗಳ ಸಮಗ್ರ ದುರಸ್ಥಿ, ಖಂಡಿಗೆ, ನಿಡುಗಳ ಮತ್ತು ಹೊಸಮನೆ ಎಂಬಲ್ಲಿ ಮೂರು ಚೆಕ್ ಡ್ಯಾಂ(ಕಿಂಡಿ ಅಣೆಕಟ್ಟು)ಗಳನ್ನು ನಿರ್ಮಿಸಲಾಗಿರುವುದು ಯೋಜನಾ ಸಮಿತಿಯ ಹಿರಿಮೆಯ ಗರಿಮೆಯಾಗಿದೆ.
ಸುಮಾರು ಒಂದೂವರೆ ದಶಕಗಳ ಹಿಂದೆ ರಾಜ್ಯಾದ್ಯಂತ ಜಾರಿಗೊಂಡ ಜಯಾನಯನ ಯೋಜನೆ(ವಾಟರ್ ಶೆಡ್ ಪ್ರಾಜೆಕ್ಟ್)ಯಲ್ಲಿ ಜಿಲ್ಲೆಯಲಲಿ 35 ಜಯಾನಯನ ಸಮಿತಿಗಳು ರಚನೆಯಾಗಿದ್ದರೂ ಪ್ರಸ್ತುತ 13 ಯೋಜನೆಗಳು ಮಾತ್ರ ಸಕ್ರಿಯವಾಗಿದೆ. ಈ ಪೈಕಿ ಮುಗು ಜಲಾನಯನ ಯೋಜನೆ ಮುಂಚೂಣಿಯಲ್ಲಿದೆ.




