ಕಾಸರಗೋಡು: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಸಾಮಾಜಿಕ ಹರಡುವಿಕೆ ಪತ್ತೆಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಸಹಿತ ಕ್ರಮಗಳನ್ನು ಆರಂಭಿಸಲಾಗಿದೆ.
ಸಾಮಾಜಿಕ ಸಂಪರ್ಕ ಮೂಲಕ ಸೋಂಕು ಪತ್ತೆಯಾಗಿರುವ ಕೇಂದ್ರಗಳಲ್ಲಿ ಮತ್ತು ಇತರ ವಲಯಗಳ ಮಾರುಕಟ್ಟೆಗಳನ್ನು ಕೇಂದ್ರೀಕರಿಸಿ ರ್ಯಾಪಿಡ್ ಆಂಟಿಜನ್ ತಪಾಸಣೆ ನಡೆಸಲಾಗುತ್ತಿದೆ. ಇದರ ಅಂಗವಾಗಿ ಮೊದಲ ದಿನ 163 ಮಂದಿಯ ಗಂಟಲರಸ ತಪಾಸಣೆಗೊಳಪಡಿಸಲಾಗಿದ್ದು, 6 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವವರ ಮತ್ತು ರೋಗ ಲಕ್ಷಣ ಹೊಂದಿರುವವರನ್ನು ರ್ಯಾಪಿಡ್ ತಪಾಸಣೆಯ ಪರಿಶೀಲನೆ ಪಟ್ಟಿಗೆ ಸೇರ್ಪಡಿಸಲಾಗುತ್ತಿದೆ.
ವಾರದಲ್ಲಿ ಸಾವಿರಕ್ಕೂ ಮಿಕ್ಕು ಮಂದಿಯ ಸ್ಯಾಂಪಲ್ ತಪಾಸಣೆ:
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗ ಬಾಧಿತರ ಸಂಖ್ಯೆಯಲ್ಲಿ ಅಳತೆ ಮೀರಿ ಹೆಚ್ಚಳ ಮತ್ತು ಸಾಮಾಜಿಕ ಸಂಪರ್ಕ ಮೂಲಕ ಸೋಂಕು ಹರಡುವಿಕೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಚುರುಕಿನೊಂದಿಗೆ ಪ್ರತಿರೋಧ ಚಟುವಟಿಕೆಗಳನ್ನು ನಡೆಸುತ್ತಾ ರಂಗದಲ್ಲಿದೆ.
ಈ ನಿಟ್ಟಿನಲ್ಲಿ ರ್ಯಾಪಿಡ್ ಆಂಟಿಜನ್ ತಪಾಸಣೆಯ ಜೊತೆಗೆ ಜು.15ರಿಂದ ಓಗ್ ಮೆಂಟಲ್ ಸರ್ವೆಲೆನ್ಸ್ ಸಲುವಾಗಿ ಎರಡು ಮೊಬೈಲ್ ತಂಡಗಳನ್ನೂ ಸಿದ್ದಪಡಿಸಿ ರಂಗಕ್ಕಿಳಿಸಲಾಗುವುದು. ಈ ತಂಡಗಳು ಪ್ರತೀವಾರ ಒಂದು ಸಾವಿರಕ್ಕೂ ಅಧಿಕ ಮಂದಿಯ ಗಂಟಲರಸ ತಪಾಸಣೆ ನಡೆಸಲಿವೆ. ಇದಕ್ಕಿರುವ ಸಜ್ಜೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಈ ಮೊಬೈಲ್ ತಂಡಗಳು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕ್ಯಾಂಪ್ ನಡೆಸಿ ಸ್ಯಾಂಪಲ್ ಸಂಗ್ರಹಿಸಲಿವೆ ಎಂದು ನುಡಿದರು.
ಜಾಗ್ರತೆ ಕೈಬಿಡಬೇಡಿ:
ಸಾರ್ವಜನಿಕರು ಯಾವ ಕಾರಣಕ್ಕೂ ಕೋವಿಡ್ ಪ್ರತಿರೋಧ ಜಾಗೃತಿ ಕೈಬಿಡಕೂಡದು ಎಂದು ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿದರು.
ಇತರ ರಾಜ್ಯಗಳಿಂದ ತರಕಾರಿ ಸಹಿತ ಸರಕು ಹೇರಿಕೊಂಡು ಬರುವ ವಾಹನಗಳಲ್ಲಿ ಸಂಚರಿಸಿದ ಮಂದಿ ಮತ್ತು ಮಾರುಕಟ್ಟೆಗಳ ತರಕಾರಿ, ಹಣ್ಣು ಮಾರಾಟ ಸಂಸ್ಥೆಗಳಿಂದ ಸೋಂಕು ವ್ಯಾಪಕವಾಗಿ ಹರಡಿರುವುದು ಪತ್ತೆಯಾಗಿದೆ. ಇಂಥಾ ಸಂಸ್ಥೆಗಳ ಸಿಬ್ಬಂದಿ ಮಾಸ್ಕ್, ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು. ಇದನ್ನು ಗಮನಿಸುವ ಹೊಣೆ ಆಯಾ ಸಂಸ್ಥೆಗಳ ಮಾಲೀಕರದು. ಸಾರ್ವಜನಿಕರು ಜಿಲ್ಲಾಡಳಿತೆ, ಆರೋಗ್ಯ ಇಲಾಖೆ ತಿಳಿಸಿರುವ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಬೇಕು. ಯಾವುದೇ ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು (ದೂರವಾಣಿ ಸಂಖ್ಯೆಗಳು: 0467 2209901, 04994 255001.) ಎಂದು ಅವರು ತಿಳಿಸಿದರು.



