ಕಾಸರಗೋಡು: ಪೋ ಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿ ಅಪರಾಧಿಯೋರ್ವನನ್ನು ಸಾಕ್ಷಿ ಸಂಗ್ರಹಕ್ಕಾಗಿ ಕಡಲ ಕಿನಾರೆಯಲ್ಲಿ ಕರೆದೊಯ್ಯುತ್ತಿದ್ದಾಗ ಪೋಲೀಸರ ಕಣ್ತಪ್ಪಿಸಿ ಕಡಲಿಗೆ ಹಾರಿದ ಘಟನೆಯೊಂದು ಬುಧವಾರ ಬೆಳಿಗ್ಗೆ ಕಾಸರಗೋಡಿನಲ್ಲಿ ನಡೆದಿದೆ.
ಎಂಟನೇ ತರಗತಿ ವಿದ್ಯಾರ್ಥಿನಿ ಸ್ನಾನ ಮಾಡುತ್ತಿದ್ದಾಗ ಕದ್ದು ನೋಡಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಯ ಬಿಟ್ಟ ಪ್ರಕರಣದ ಆರೋಪಿ ಕೂಡ್ಲು ಕೋಳೀಯಡ್ಕ ನಿವಾಸಿ ಮಹೇಶ್(28) ಸಮುದ್ರಕ್ಕೆ ಹಾರಿದವನಾಗಿದ್ದಾನೆ. ಪ್ರಕರಣದ ಸಂಬಂಧ ಪೋಲೀಸ್ ಕಸ್ಟಡಿಯಲ್ಲಿದ್ದ ಈತನಿಂದ ದೂರಿನ ಬಗ್ಗೆ ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಲು ಬುಧವಾರ ಬೆಳಿಗ್ಗೆ ನೆಲ್ಲಿಕುನ್ನು ಕಿರು ಬಂದರಿನ ಬಳಿ ಕರೆದೊಯ್ಯುತ್ತಿದ್ದಾಗ ಪೋಲೀಸರಿಂದ ತಪ್ಪಿಸಿ ಹಠಾತ್ ಸಮುದ್ರಕ್ಕೆ ಹಾರಿ ಮರೆಯಾದನು. ಈ ಸಂದರ್ಭ ಪೋಲೀಸ್ ಸಿಬ್ಬಂದಿ ಪ್ರಮೋದ್ ಕೂಡಲೇ ಸಮುದ್ರಕ್ಕೆ ಜಿಗಿದು ಅಪರಾಧಿಯ ಪತ್ತೆಗೆ ಶ್ರಮಿಸಿದರೂ ಕಂಡುಹಿಡಿಯುವಲ್ಲಿ ವಿಫಲರಾದರು. ಎಸ್ ಐ ವಿಪಿಲ್, ಮಹಿಳಾ ಎಸ್ ಐ ರೂಪಾ ಹಾಗೂ ಸ್ಥಳೀಯ ಮೀನು ಕಾರ್ಮಿಕರು ಪ್ರಮೋದ್ ಅವರನ್ನು ಸಮುದ್ರದಿಂದ ಮೇಲೆತ್ತಿ ರಕ್ಷಿಸಿದರು.
ಬಾಲಕಿಯ ಸ್ನಾನದ ದೃಶ್ಯಗಳುಳ್ಳ ವೀಡಿಯೋ ಮುದ್ರಿಕೆಯನ್ನು ನೆಲ್ಲಿಕುಂಜೆ ಕಿರು ಬಂದರಿನಲ್ಲಿ ಅಡಗಿಸಿಟ್ಟಿರುವುದಾಗಿ ಮಹೇಶ್ ತಿಳಿಸಿರುವುದರಿಂದ ಪೋಲೀಸರು ಸಾಕ್ಷ್ಯ ಸಂಗ್ರಹಕ್ಕೆ ಆರೋಪಿಯೊಂದಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಆತ್ಮಹತ್ಯೆಗೆ ಶ್ರಮಿಸಿದ್ದೇ ಅಥವಾ ತಪ್ಪಿಸಿಕೊಳ್ಳುವ ಕರಾಮತ್ತು ನಡೆಸಿದನೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಪೋಲೀಸರ ತಂಡ ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದೆ.


